ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಕನ್ನಡ ಚಿತ್ರರಂಗಕ್ಕೆ ಡಾ. ರಾಜ್ಕುಮಾರ್ ಅವರ ಕುಟುಂಬ ಸಾಕಷ್ಟು ಕೊಡುಗೆ ನೀಡಿದೆ. ಅವರ ಕುಟುಂಬದ ಹಲವರು ಸ್ಯಾಂಡಲ್ವುಡ್ನಲ್ಲಿ ಸಕ್ರಿಯರಾಗಿದ್ದಾರೆ. ಅದೇ ಕುಟುಂಬದ ಹೊಸ ತಲೆಮಾರಿನ ಪ್ರತಿಭೆಗಳು ಕೂಡ ಚಿತ್ರರಂಗಕ್ಕೆ ಪ್ರವೇಶ ನೀಡುತ್ತಿದ್ದಾರೆ. ಡಾ. ರಾಜ್ಕುಮಾರ್ ಅವರ ಹಿಂದೆ ಶಕ್ತಿಯಾಗಿ ನಿಂತಿದ್ದವರು ಸಹೋದರ ವರದಪ್ಪ. ಈಗ ವರದಪ್ಪ ಅವರ ಮೊಮ್ಮಗ ಪೃಥ್ವಿರಾಜ್ ಕೂಡ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಅವರು ನಟಿಸಿದ ಮೊದಲ ಚಲನ ಚಿತ್ರ ‘ಮಿಂಚುಹುಳು’ ಅ.4ರಂದು ಬಿಡುಗಡೆ ಆಗಲಿದೆ.
‘ಮಿಂಚುಹುಳು’ ಚಲನಚಿತ್ರಕ್ಕೆ ಮಹೇಶ್ ಕುಮಾರ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಾಜಗೋಪಾಲ್ ದೊಡ್ಡಹುಲ್ಲೂರು ಅವರು ನಿರ್ಮಾಣ ಮಾಡಿದ್ದಾರೆ. ಅವರಿಗೆ ವಿಜಯ್ ಕುಮಾರ್, ಅಬ್ದುಲ್ ರಫೀಕ್ ಉಲ್ಲಾ ಕೂಡ ಸಾಥ್ ನೀಡಿದ್ದಾರೆ. ಅಣ್ಣಾವ್ರ ಆತ್ಮೀಯರಾದ ದೊಡ್ಡಹುಲ್ಲೂರು ರುಕ್ಕೋಜಿ ರಾವ್ ಅವರು ತಮ್ಮೂರಿನ ನಿರ್ಮಾಪಕರಿಗೆ ಬೆಂಬಲವಾಗಿ ನಿಂತಿದ್ದಾರೆ.
‘ಈ ಚಲನಚಿತ್ರ ಆಗಲು ಪುನೀತ್ ರಾಜ್ಕುಮಾರ್ ಅವರೇ ಕಾರಣ. ಕನ್ನಡಕ್ಕೆ ಉತ್ತಮ ಕಥಾವಸ್ತು ಇರುವ ಚಲನಚಿತ್ರಗಳ ಅಗತ್ಯವಿದೆ’ ಎಂದು ನಿರ್ದೇಶಕ ಮಹೇಶ್ ಕುಮಾರ್ ಹೇಳಿದ್ದಾರೆ. ನಟ ಪೃಥ್ವಿರಾಜ್ ಮಾತನಾಡಿ, ‘ಈ ಚಲನಚಿತ್ರದಲ್ಲಿ ಮುಖ್ಯ ಪಾತ್ರಕ್ಕೆ ಪೂರಕವಾಗಿ ನಿಲ್ಲುವ ಪಾತ್ರ ನನಗೆ ಸಿಕ್ಕಿದೆ’ ಎಂದರು. ನಿರ್ಮಾಪಕ ರಾಜ್ ಗೋಪಾಲ್ ಮಾತನಾಡಿ, ‘ನಾನು ಚಲನಚಿತ್ರ ಮಾಡಬೇಕೆಂದುಕೊಂಡಿರಲಿಲ್ಲ. ಬಾಲ್ಯದ ಗೆಳೆಯ ರುಕ್ಕೋಜಿ ಅವರು ಈ ರೀತಿಯ ಕಥೆ ಇದೆ ಅಂತ ಹೇಳಿದ್ದಕ್ಕೆ ಎಲ್ಲರೂ ಸೇರಿ ಈ ಚಲನಚಿತ್ರವನ್ನು ಮಾಡಿದ್ದೇವೆ’ ಎಂದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್