ಹುಬ್ಬಳ್ಳಿ 28 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಸರಿಯಾದ ಮೂಲಭೂತ ಸೌಲಭ್ಯಗಳು ಹಾಗೂ ಉತ್ತಮ ಚಿಕಿತ್ಸೆ ದೊರೆಯುವುದಿಲ್ಲ ಎಂದು ಸರ್ಕಾರಿ ಹಾಗೂ ಸರ್ಕಾರಿ ಸಹಭಾಗಿತ್ವದ ಆಸ್ಪತ್ರೆಗಳು ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಇದಕ್ಕೆ ಅಪವಾದ ಎಂಬಂತೆ ಮಹಾನಗರ ಪಾಲಿಕೆ ವತಿಯಿಂದ ನಿರ್ವಹಿಸಲಾಗುತ್ತಿರುವ ಹುಬ್ಬಳ್ಳಿಯ ಚಿಟಗುಪ್ಪಿ ಆಸ್ಪತ್ರೆ ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿದೆ.
ಈ ಆಸ್ಪತ್ರೆ ಬಡರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುವ ಮೂಲಕ ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು ಹೊಡೆದು ನಿಂತಿದೆ. ಸ್ವಚ್ಛತೆ, ಸೇವೆಯಲ್ಲಿ ಚಿಟಗುಪ್ಪಿ ಸರ್ಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗೂ ಕಡಿಮೆ ಇಲ್ಲ. ಇದಕ್ಕೆ ಉತ್ತಮ ವೈದ್ಯಕೀಯ ಸೌಲಭ್ಯ ಕಾರಣವಾಗಿದ್ದು, ದಿನದಿಂದ ದಿನಕ್ಕೆ ಚಿಕಿತ್ಸೆಗಾಗಿ ಆಗಮಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ಚಿಟಗುಪ್ಪಿ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಹಾಗೂ ಅವರ ವೈದ್ಯಕೀಯ ತಂಡ ನೂರಾರು ಕ್ಲಿಷ್ಟಕರವಾದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ನಡೆಸುತ್ತಿರುವುದರಿಂದಾಗಿ, ಈ ಆಸ್ಪತ್ರೆ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿದೆ.
ಈ ಮೊದಲು 30 ಹಾಸಿಗೆಗಳಿಗೆ ಮಾತ್ರ ಸೀಮಿತವಾಗಿತ್ತು, ಇದೀಗ ನೂರು ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿಸಿದಾಗಿನಿಂದಲೂ ಸಾಕಷ್ಟು ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ. ಇಲ್ಲಿ ಲ್ಯಾಪೋಸ್ಕೋಪಿ ಶಸ್ತ್ರಚಿಕಿತ್ಸೆ ಹೆಚ್ಚಿಗೆ ನಡೆಸಲಾಗುತ್ತದೆ. ಅದರಲ್ಲೂ ಮಹಿಳೆಯರ ಗರ್ಭಾಶಯ, ಗಡ್ಡೆಗಳು, ಬ್ರೈನ ಟ್ಯೂಮರ್ಗಳ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಶ್ರೀಧರ ದಂಡೆಪ್ಪನವರ ಈ ಮೊದಲು ತಿಂಗಳಿಗೆ ೨೫-೩೦ ಹೆರಿಗೆ ನಡೆಯುತ್ತಿದ್ದವು, ಆದರೆ ಇದೀಗ ಪ್ರತಿ ತಿಂಗಳು ೧೫೦ಕ್ಕೂ ಹೆಚ್ಚು ನಡೆಯುತ್ತಿವೆ ಹಾಗೂ ೨೫ಕ್ಕೂ ಹೆಚ್ಚು ಸಿಜೆರಿಯನ ಹೆರಿಗೆ ಮಾಡಲಾಗುತ್ತಿದೆ ಮತ್ತು ೨೦೦ ಕ್ಕೂ ಅಧಿಕ ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ
ಅತ್ಯಾಧುನಿಕ ಚಿಕಿತ್ಸಾ ಸಲಕರಣೆಗಳ ಆಸ್ಪತ್ರೆಯಲ್ಲಿ ಇರುವುದರಿಂದ ಸಂಘ, ಸಂಸ್ಥೆಗಳ ನೆರವಿನಿಂದ ನುರಿತ ಹಾಗೂ ಸೇವಾ ಮನೋಭಾವದ ವೈದ್ಯರನ್ನು ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ ಉತ್ತಮ ವೈದ್ಯಕೀಯ ಸೇವೆ ನೀಡುವುದರಲ್ಲಿ ಚಿಟಗುಪ್ಪಿ ಆಸ್ಪತ್ರೆ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು ಲಭ್ಯವಿರುವುದರಿಂದ ಬಡರೋಗಿಗಳಿಗೆ ಉತ್ತಮ ಸೇವೆ ಸಿಗುತ್ತಿದೆ. ಬಡರೋಗಿಗಳು ಹಾಗೂ ಗರ್ಭಿಣಿ ಮಹಿಳೆಯರಿಗೆ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಶುಲ್ಕ ವಿಧಿಸಲಾಗುತ್ತದೆ. ಇಲ್ಲಿ ಉಚಿತವಾಗಿ ಉತ್ತಮ ಸೇವೆ ಸಿಗುತ್ತಿದೆ ಎಂದರು.
ಆಸ್ಪತ್ರೆಗೆ ಬರುವ ಹೊರ ಹಾಗೂ ಒಳ ರೋಗಿಗಳ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಿದೆ. ಈ ಮೊದಲು 50-60 ಜನ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಈಗ ಪ್ರತಿದಿನ 600ಕ್ಕೂ ಹೆಚ್ಚು ಜನ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೀಗ ಮಧುಮೇಹ ಕೇಂದ್ರ ಪ್ರಾರಂಭಿಸಲಾಗಿದ್ದು ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆ ಚಿಕಿತ್ಸೆಗೆ ಹೆಚ್ಚಿನ ಜನ ಆಗಮಿಸುತ್ತಿದ್ದಾರೆ ಎಂದು ಹೇಳಿದರು.
ಎಲ್ಲಾ ಔಷಧಿ ಉಚಿತವಾಗಿ ನೀಡಲಾಗುತ್ತದೆ. ನೂರು ಹಾಸಿಗೆ ಆಸ್ಪತ್ರೆ ಆಗಿದ್ದರಿಂದ ಆಸ್ಪತ್ರೆ ಭರ್ತಿಯಾಗಿರುತ್ತದೆ, ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಖಾಸಗಿ ಆಸ್ಪತ್ರೆಯಂತೆ ವಿಐಪಿ ಕೊಠಡಿ ತೆರೆಯಲಾಗುವುದು ಎಂದು ಡಾ. ಶ್ರೀಧರ ದಂಡೆಪ್ಪನವರ್ ಮಾಹಿತಿ ನೀಡಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa