ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.) :
ಆ್ಯಂಕರ್ : ಬೆಂಗಳೂರು ರೈಲ್ವೆ ವ್ಯಾಪ್ತಿಯ 108 ನಿಲ್ದಾಣಗಳಲ್ಲಿ ಇನ್ನುಮುಂದೆ ಆನ್ಲೈನ್ ಹಣ ಪಾವತಿ ಮಾಡುವ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣ ಮಾಡಬಹುದಾಗಿದೆ. ಬೆಂಗಳೂರಿನ ಕೆಎಸ್ಆರ್ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ಸ್ಟೇಷನ್, ಎಸ್ಎಂವಿಟಿ, ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಸೇರಿದಂತೆ ಬೆಂಗಳೂರು ವ್ಯಾಪ್ತಿಯ ಎಲ್ಲಾ ರೈಲ್ವೆ ಸ್ಟೇಷನ್ಗಳಲ್ಲೂ ಕ್ಯೂಆರ್ ಕೋಡ್ಗಳನ್ನು ಅಳವಡಿಸಲಾಗಿದೆ.
ಪ್ರಯಾಣಿಕರು ಇನ್ನು ಮುಂದೆ ರೈಲು ಟಿಕೆಟ್‌ಗಾಗಿ ಗಂಟೆಗಟ್ಟಲೆ ಕಾಯಬೇಕಿಲ್ಲ. ಟಿಕೆಟ್ ಕೌಂಟರ್‌ಗಳಲ್ಲಿ ಚಿಲ್ಲರೆ ಸಮಸ್ಯೆಯೂ ಉಂಟಾಗುವುದಿಲ್ಲ. ಎಲ್ಲದಕ್ಕೂ ಪರಿಹಾರ ಎಂಬಂತೆ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬೆಂಗಳೂರು ರೈಲ್ವೆ ವ್ಯಾಪ್ತಿಯಲ್ಲಿ ಕ್ಯೂಆರ್ ಕೋಡ್ ವ್ಯವಸ್ಥೆ ಜಾರಿಗೆ ಬಂದಿದ್ದು, ಹೊಸ ವ್ಯವಸ್ಥೆಗೆ ಪ್ರಯಾಣಿಕರು ಖುಷಿಯಾಗಿದ್ದಾರೆ.
140 ಯುಟಿಎಸ್ ಕೌಂಟರ್‌ಗಳಲ್ಲಿ ಹೊಸ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಲಾಗಿದೆ. ಸಾಮಾನ್ಯ ದರ್ಜೆಯ ಟಿಕೆಟ್ ಮೊತ್ತದ ಪಾವತಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ವ್ಯವಸ್ಥೆ ತರಲಾಗಿದೆ.ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ನಲ್ಲಿ 20 ಕೌಂಟರ್, ಯಶವಂತಪುರದಲ್ಲಿ 10 ಕೌಂಟರ್ ಸೇರಿದಂತೆ ಬೆಂಗಳೂರು ವ್ಯಾಪ್ತಿಯ 108 ರೈಲ್ವೇ ಸ್ಟೇಷನ್ಗಳ 140 ಟಿಕೆಟ್ ಕೌಂಟರ್ ಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ.
ಪ್ರತಿದಿನ 4 ಸಾವಿರ ಪ್ರಯಾಣಿಕರು ಆನ್ಲೈನ್ ಪಾವತಿ ಮೂಲಕ ಟಿಕೆಟ್ ಖರೀದಿ ಮಾಡಿ ಪ್ರಯಾಣ ಮಾಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಯಾಣಿಕರು, ತುಂಬಾ ಸಲ ಚಿಲ್ಲರೆ ಹಣವಿಲ್ಲದೆ ರೈಲು ತಪ್ಪಿ ಹೋಗುತ್ತಿತ್ತು. ಕ್ಯೂಆರ್ ಕೋಡ್ ಟಿಕೆಟ್ ವ್ಯವಸ್ಥೆಯಿಂದ ಟಿಕೆಟ್ ಕೌಂಟರ್‌ಗಳಲ್ಲಿ ಜಗಳ ತಪ್ಪುತ್ತದೆ. ತುಂಬಾ ಒಳ್ಳೆಯ ಕೆಲಸ, ಡಿಜಿಟಲ್ ಆಗಬೇಕಿತ್ತು ಆಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್