ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು :ಸಂಸದ ಎಂ. ಮಲ್ಲೇಶ್ ಬಾಬು
ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು :ಸಂಸದ ಎಂ. ಮಲ್ಲೇಶ್ ಬಾಬು
ಚಿತ್ರ - ಕೋಲಾರದಲ್ಲಿ ಸಂಸದ ಮಲ್ಲೇಶ್ ಬಾಬು ದಿಶಾ ಸಭೆ ನಡೆಸಿ ಕೇಂದ್ರದ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲಿಸಿದರು.


ಕೋಲಾರ, 10 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಅಧಿಕಾರಿಗಳು ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸಬೇಕು. ಅಂದಾಗ ಮಾತ್ರ ಸರ್ಕಾರದ ಅಭಿವೃದ್ಧಿ ಕೆಲಸಗಳು ಸಾಮಾನ್ಯ ಜನರಿಗೆ ತಲುಪುತ್ತವೆ. ಇಲ್ಲವಾದಲ್ಲಿ ಕಾಳಜಿಯಿಂದ ಜಾರಿಗೆ ತಂದಿರುವ ಯೋಜನೆಗಳು ಹಳ್ಳ ಹಿಡಿಯುತ್ತವೆ ಎಂದು ಕೋಲಾರ ಲೋಕಸಭಾ ಸದಸ್ಯರು ಹಾಗೂ ದಿಶಾ ಸಮಿತಿ ಅಧ್ಯಕ್ಷರು ಆದ ಎಂ. ಮಲ್ಲೇಶ್ ಬಾಬು ಅವರು ಅಭಿಪ್ರಾಯ ಪಟ್ಟರು.

ಇಂದು ಜಿಲ್ಲಾಪಂಚಾಯತ್ ಸಭಾಂಗಣ ದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ( ದಿಶಾ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನ ಕುರಿತಾಗಿ ಪರಿಶೀಲನೆ ನಡೆಸಿದ ಅವರು ಕೇಂದ್ರ ಸರ್ಕಾರ ನೀಡಿರುವ ಅನುದಾನದ ಮಾಹಿತಿ ಜನಸಾಮಾನ್ಯರಿಗೆ ತಿಳಿಯಪಡಿಸಬೇಕು. ಅಂತಹ ಯೋಜನೆಗಳ ಸಂಪೂರ್ಣ ಲಾಭವನ್ನು ಜಿಲ್ಲೆಯ ಜನತೆ ಪಡೆಯಬೇಕು ಎಂದರು.

ಯೋಜನೆಗಳ ಅನುಷ್ಟಾನ : ಬಡಜನರ, ದೀನದಲಿತರ, ಮಹಿಳೆಯರ ಶ್ರೇಯೋಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರದ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತದೆ. ಯೋಜನೆಯ ಸ್ಪಷ್ಟತೆಯನ್ನು ನಿಖರವಾಗಿ ತಿಳಿದುಕೊಂಡು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿ ಯೋಜನೆಯ ಸೌಲಭ್ಯ ಅರ್ಹರಿಗೆ ತಲುಪಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಬಡಜನರು ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬರಲು ಉದ್ದೇಶ ಇಟ್ಟುಕೊಂಡು ಯೋಜನೆ ಅನುಷ್ಠಾನಗೊಳಿಸಲಾಗುತ್ತದೆ. ಇಲಾಖೆಗಳಿಂದ ಅರ್ಹರಿಗೆ ಕಾನೂನು ಚೌಕಟ್ಟಿನಲ್ಲಿ ಯೋಜನೆಗಳ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದರೂ ಸಹಿತ ಕೆಲವೊಂದು ಸಂದರ್ಭಗಳಲ್ಲಿ ಕಾನೂನಿನ ಕ್ರಮಗಳ ಹಾಗೂ ಹೆಚ್ಚಿನ ಮಾರ್ಗದರ್ಶನ ಪಡೆದು ಅದರಲ್ಲಿ ಸೂಕ್ತ ಮಾರ್ಪಾಡುಗಳೊಂದಿಗೆ ಕಾರ್ಯನಿರ್ವಹಿಸಬೇಕಾತ್ತದೆ ಎಂದು ತಿಳಿಸಿದರು. ಯೋಜನೆಯ ಅನುಷ್ಠಾನಕ್ಕೆ ವಿನಾ ಕಾರಣ ವಿಳಂಬ ಹಾಗೂ ಉದಾಸೀನ ತೋರಬಾರದು. ಹಾಗೆ ಮಾಡಿದರೆ ನಮ್ಮಷ್ಟಕ್ಕೆ ನಾವೇ ಆತ್ಮವಂಚನೆ ಮಾಡಿಕೊಂಡಂತಾಗುತ್ತದೆ ಎಂದರು.

ಕುಡಿಯುವ ನೀರಿನ ಪೂರೈಕೆಗೆ ಪ್ರಥಮಾದ್ಯತೆ: ಕುಡಿಯುವ ನೀರಿನ ಸೌಲಭ್ಯವು ಮೂಲಭೂತ ಸೌಲಭ್ಯಗಳಲ್ಲಿ ಒಂದಾಗಿದ್ದು ಈಗಾಗಲೇ ಮಳೆಗಾಲ ಆರಂಭವಾಗಿದ್ದು ಜಿಲ್ಲೆಯಲ್ಲಿ ಮಳೆಯ ನೀರು ಸದ್ಭಳಕೆ ಮಾಡುವ ಕುರಿತು ಹಾಗೂ ಕುಡಿಯುವ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಬೇಕು. ಜಿಲ್ಲೆಯಲ್ಲಿ ನೀರಿನ ಸಮಸ್ಯೆಯಿರುವ ಗ್ರಾಮಗಳ ಹಾಗೂ ಸಮರ್ಪಕವಾಗಿ ನೀರು ದೊರೆಯುವ ಸ್ಥಳಗಳ ಪಟ್ಟಿ ಮಾಡಿ ನೀರಿನ ಪರಿಸ್ಥಿತಿಯನ್ನು ಅವಲೋಕಿಸುವ ಒಂದು ತಂಡವನ್ನು ಮಾಡಬೇಕು. ಈ ಕುರಿತು ತಹಶೀಲ್ದಾರರು ಹಾಗೂ ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜೆಜೆಎಂ ಕಾಮಗಾರಿ: ಜಲಜೀವನ ಮಿಷನ್ ಯೋಜನೆಯ ೧೮೧೪ ಕಾಮಗಾರಿಗಳಲ್ಲಿ ೧೩೩೨ ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಅವರು ಸಭೆಗೆ ತಿಳಿಸಿದಾಗ ಬಡವರಿಗೆ ಶಾಶ್ವತವಾಗಿ ನೀರು ಒದಗಿಸುವ ಯೋಜನೆ ಜಲಜೀವನ ಮಿಷನ್ ( ಜೆಜೆಎಂ) ಯೋಜನೆಯಾಗಿದ್ದು ಈ ಯೋಜನೆಯ ಈಗಾಗಲೇ ಅನುಷ್ಟಾನವಾಗಿದ್ದರೂ ಸಹಿತ ಮನೆ ಮನೆಗೆ ನೀರು ಸಮರ್ಪಕವಾಗಿ ಸರಬರಾಜಾಗುತ್ತಿಯೋ ಇಲ್ಲವೋ ಎನ್ನುವುದರ ಪರಿಶೀಲನೆ ಮಾಡಬೇಕು. ಅಲ್ಪಾವಧಿ ಟೆಂಡರ್ ಕರೆದು ಬಾಕಿ ಉಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಸಂಸದರು ತಿಳಿಸಿದರು.

ಕೃಷಿ ಇಲಾಖೆ ಹಾಗೂ ಸಹಕಾರ ಇಲಾಖೆಗಳು ಸಮನ್ವಯ ಸಾಧಿಸುವಂತೆ ಜಿಲ್ಲಾಧಿಕಾರಿಗಳು ನಿಗಾ ವಹಿಸಬೇಕು.ಸಹಕಾರ ಸಂಘಗಳ ಮೂಲಕ ರೈತರಿಗೆ ಬಿತ್ತನೆ ಬೀಜ ಗೊಬ್ಬರ ಸರಬರಾಜು ಆಗಬೇಕು. ನಗರದ ಕುಡಿಯುವ ನೀರಿನ ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯವನ್ನು ಸರಿಪಡಿಸಲು ಜಿಲ್ಲಾಧಿಕಾರಿಗಳು ವಾರಕ್ಕೊಂದು ಸಾರಿಯಾದರೂ ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರೊಂದಿಗೆ ಸಭೆ ಜರುಗಿಸಿ ಸಮರ್ಪಕ ಕುಡಿಯುವ ನೀರಿನ ಪೂರೈಕೆಯಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಎಂದರು.

ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಅವರು ಮಾತನಾಡಿ ಜೆಜೆಎಂ ಯೋಜನೆಯಡಿ ಸಮರ್ಪಕ ನೀರು ಸರಬರಾಜಿನ ಕುರಿತು ಪರಿಶೀಲನೆ ನಡೆಸಬೇಕು. ಪೈಪ್ ಒಡೆದು ನೀರು ಪೊ?ಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೆ.ಸಿ.ವ್ಯಾಲಿ ನೀರನ್ನು ಹೊಸಕೋಟೆಗೆ ಹರಿಸಲಾಗುತ್ತಿದೆ. ಕೋಲಾರ ಜನತೆಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ನಗರದ ಅಮಾನಿ ಕೆರೆಯನ್ನು ಸಿ ಎಸ್ ಆರ್ ನಿಧಿಯಿಂದ ಸುಂದರಿಕರಣ ಮಾಡಲಾಗುತ್ತಿದೆ ಆದರೆ ಮತ್ತೆ ಆ ಸ್ಥಳದಲ್ಲಿ ಜೋನ್ದು ಹುಲ್ಲು ಬೆಳೆಯುತ್ತಿದೆ. ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಲು ಕ್ರಮ ವಹಿಸಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕಿ ಸುಮಾ ಮಾತನಾಡಿ ಜಿಲ್ಲೆಯಲ್ಲಿ ಬಿತ್ತನೆ ಪ್ರದೇಶದ ೮೧.೩೬% ರಷ್ಟು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ರಾಗಿ ಪ್ರಮುಖ ಬೆಳೆಯಾಗಿದ್ದು ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಅಭಾವವಿರುವುದಿಲ್ಲ ಎಂದು ಸಭೆಗೆ ತಿಳಿಸಿದರು. ರೈತರಿಗೆ ಸಮರ್ಪಕ ಪ್ರಮಾಣದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಲಭ್ಯವಾಗಬೇಕು. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಮಾರಾಟಗಾರರು (ಡೀಲರ್ಸ) ಗಳಿದ್ದರೆ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು. ರೈತರಿಗಿರುವ ಯೋಜನೆಗಳನ್ನು ವಿಳಂಬ ಮಾಡದೇ ಅವರಿಗೆ ದೊರಕಿಸಿದರೆ ಅದೇ ಅವರಿಗೆ ನ್ಯಾಯ ಒದಗಿಸಿದಂತಾಗುತ್ತದೆ ಎಂದು ಸಂಸದರು ಹೇಳಿದರು.

ಸಭೆಯಲ್ಲಿ ಉದ್ಯೋಗ ಖಾತ್ರಿ ಯೋಜನೆ, ಫಸಲ ಬಿಮಾ ಯೋಜನೆ, ಎನ್.ಎಚ್ ಎಂ, ಶಿಕ್ಷಣ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಗತಿ ಪರಿಶೀಲನೆ ಜರುಗಿತು.

ಸಭೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು. ಶ್ರೀನಿವಾಸಪುರ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ. ಮುಳಬಾಗಿಲು ಶಾಸಕ ಸಮೃದ್ಧಿ ಮಂಜುನಾಥ್ ಕೋಲಾರದ ಶಾಸಕ ಡಾ. ಕೊತ್ತೂರು. ಜಿ. ಮಂಜುನಾಥ್, ಜಿಲ್ಲಾಧಿಕಾರಿ ಅಕ್ರಂ ಪಾಷ . ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಬಿ. ನಿಖಿಲ್ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಅಂಬಿಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ನಾರಾಯಣ ಸ್ವಾಮಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು

ಚಿತ್ರ - ಕೋಲಾರದಲ್ಲಿ ಸಂಸದ ಮಲ್ಲೇಶ್ ಬಾಬು ದಿಶಾ ಸಭೆ ನಡೆಸಿ ಕೇಂದ್ರದ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande