ಕಾವೇರಿ ನಿವಾಸದಲ್ಲಿ ಉಪಹಾರ ಸಭೆ : ಮುಖ್ಯಮಂತ್ರಿ ಬೆಂಬಲಕ್ಕೆ ಸಂಪುಟ
ಬೆಂಗಳೂರು, 01 ಆಗಸ್ಟ್ (ಹಿ.ಸ.) : ಆ್ಯಂಕರ್ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಲು ರಾಜ್ಯ ಸರ್ಕಾರದ ಎಲ್ಲ ಸಚಿವರುಗಳು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರ
meeting


ಬೆಂಗಳೂರು, 01 ಆಗಸ್ಟ್ (ಹಿ.ಸ.) :

ಆ್ಯಂಕರ್ : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣ ಭೀತಿಯಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲಲು ರಾಜ್ಯ ಸರ್ಕಾರದ ಎಲ್ಲ ಸಚಿವರುಗಳು ಒಮ್ಮತದ ತೀರ್ಮಾನ ಕೈಗೊಂಡಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ದ ಪ್ರಕರಣ ಹೂಡಲು ಅನುಮತಿ ನೀಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಟಿ.ಜೆ. ಅಬ್ರಾಹಂ ರಾಜ್ಯಪಾಲರಿಗೆ ಸಲ್ಲಿಸಿರುವ ಮನವಿಯ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಸಚಿವರುಗಳ ಉಪಹಾರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಬೆಂಬಲಕ್ಕೆ ನಿಲ್ಲುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಇಲ್ಲ. ರಾಜಕೀಯವಾಗಿ ಅವರನ್ನು ಮುಗಿಸಲು ಷಡ್ಯಂತ್ರ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಹಾಗಾಗಿ ನೀವು ಯಾವುದಕ್ಕೂ ಜಗ್ಗುವ, ಕುಗ್ಗುವ ಅಗತ್ಯವಿಲ್ಲ. ನಿಮ್ಮ ಜತೆ ನಾವಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆದಿಯಾಗಿ ಎಲ್ಲ ಸಚಿವರುಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅಭಯ ನೀಡಿದರು.

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ವಿವರ ನೀಡುವಂತೆ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೆ ಇಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯಪಾಲರ ನೋಟಿಸ್, ಅವರಿಗೆ ನೀಡಬೇಕಾಗಿರುವ ಪ್ರತ್ಯುತ್ತರ ಎಲ್ಲದರ ಬಗ್ಗೆಯೂ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ನಿವಾಸ ಕಾವೇರಿಯಲ್ಲಿ ಎಲ್ಲ ಸಚಿವರಿಗೂ ಉಪಹಾರ ಸಭೆಯನ್ನು ಕರೆದಿದ್ದರು.

ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲ ಸಚಿವರುಗಳು ಭಾಗಿಯಾಗಿದ್ದು, ಎಲ್ಲರೂ ಮುಖ್ಯಮಂತ್ರಿಗಳ ಬೆಂಬಲಕ್ಕೆ ನಿಲ್ಲುವ ಒಮ್ಮತದ ತೀರ್ಮಾನಕ್ಕೆ ಬಂದರು ಎಂದು ಹೇಳಲಾಗಿದೆ.

ಮುಡಾ ಹಗರಣವನ್ನು ಮುಖ್ಯಮಂತ್ರಿಗಳನ್ನು ರಾಜಕೀಯವಾಗಿ ತುಳಿಯಲು ಬಳಸಿಕೊಳ್ಳಲಾಗುತ್ತಿದೆ. ಇದರ ವಿರುದ್ಧ ನಾವೆಲ್ಲಾ ಸಾಂಘಿಕ ಹೋರಾಟ ಮಾಡುತ್ತೇವೆ. ನೀವು ಯಾವುದಕ್ಕೂ ವಿಚಲಿತರಾಗುವುದು ಬೇಡ ಎಂದು ಕೆಲ ಸಚಿವರು ಸಭೆಯಲ್ಲಿ ಹೇಳಿದ್ದು, ಇದಕ್ಕೆ ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಚಿವರುಗಳು ಸಹಮತ ವ್ಯಕ್ತಪಡಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ


 rajesh pande