ಬಳ್ಳಾರಿ, 1 ಆಗಸ್ಟ್ (ಹಿ.ಸ.) :
ಆ್ಯಂಕರ್ : ಡಾ.ಮಹಾಂತ ಶಿವಯೋಗಿಯವರು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಜನರಲ್ಲಿನ ದುಶ್ಚಟಗಳನ್ನೇ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಎಂದು ಮಹಾನಗರ ಪಾಲಿಕೆಯ ಮಹಾಪೌರರಾದ ಮುಲ್ಲಂಗಿ ನಂದೀಶ್ ಅವರು ಹೇಳಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಬೆಂಗಳೂರು ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ರಾಜ್‍ಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಛಯ ಆವರಣದ ಹೊಂಗಿರಣದಲ್ಲಿ ಏರ್ಪಡಿಸಿದ್ದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಾಗಲಕೋಟೆಯ ಜಮಖಂಡಿ ತಾಲ್ಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ರ ಆ.01 ರಂದು ಜನಿಸಿದರು. ತಮ್ಮ 10 ನೇ ವಯಸ್ಸಿನಲ್ಲಿ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿ ಆದರು. ಕಾಶಿಯಲ್ಲಿ ಸಂಸ್ಕøತ, ಹಿಂದಿ, ಯೋಗ, ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಪರಿಣಿತಿ ಸಾಧಿಸಿ ಬಹುಮುಖ ಪ್ರತಿಭೆ ಹೊಂದಿದ್ದರು ಎಂದು ಅವರು ತಿಳಿಸಿದರು.
ಅಂದಿನ ಸಮಯದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ಆವರಿಸಿದ್ದಾಗ ಶಿಕ್ಷಣ ಪಡೆಯುತ್ತಿದ್ದ ಕಾಶಿಯಿಂದ ಆಗಮಿಸಿ, ನೂರಾರು ಗ್ರಾಮಗಳಲ್ಲಿ ಗಂಜಿ ಕೇಂದ್ರ ಆರಂಭಿಸಿ ದಾಸೋಹ ನಡೆಸಿ ಗೋಶಾಲೆಗಳನ್ನು ಆರಂಭಿಸಿದರು ಎಂದರು.
ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ 1 ನ್ನು ರಾಜ್ಯಾದ್ಯಂತ ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ಸರ್ಕಾರವು ಆದೇಶಿಸಿದೆ ಇಂದಿನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಎಸ್‍ಜಿಟಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಬಸವರಾಜ ಅಮಾತಿ ಅವರು ವಿಶೇಷ ಉಪನ್ಯಾಸದಲ್ಲಿ ಮಾತನಾಡಿ, ಕುಡಿತದ ಚಟದಿಂದ ಪರಿಶಿಷ್ಟ ಜಾತಿಯ ಯುವಕನೊಬ್ಬ ಜೀವ ಕಳೆದುಕೊಂಡ ಸುದ್ದಿ ಶ್ರೀಗಳು ಅವನ ಕೇರಿಗೆ ಸಾಂತ್ವನ ಹೇಳಲು ತೆರಳಿದ್ದಾಗ ಆತನ ಪತ್ನಿ ಮತ್ತು ಮಕ್ಕಳು ಉಪವಾಸದಿಂದ ದು:ಖಿಸುವುದನ್ನು ಕಂಡು ಇಂತಹ ಸಾವಿರಾರು ಕುಟುಂಬಗಳ ಕುಡಿತ ಮತ್ತು ಇತರೇ ದುಶ್ಚಟಗಳಿಂದ ಹಾಳಾಗಿರುವುದನ್ನು ಅರಿತರು. ಇಂತಹ ದುಶ್ಚಟಗಳಿಗೆ ಒಳಗಾಗಿರುವವರನ್ನು ವ್ಯಸನ ಮುಕ್ತಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಎಂಬ ಯೋಜನೆಯನ್ನು 1975 ರಿಂದ ಆರಂಭಿಸಿದ ಅವರು ಜನರಲ್ಲಿನ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಹಾಕಿಸಿಕೊಳ್ಳುವದರಲ್ಲಿ ಯಶಸ್ವಿಯಾದರು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋರೋಗ ಶಾಸ್ತ್ರಜ್ಞ ಡಾ.ರೋಹನ್ ವನಗುಂದಿ ಅವರು ಮಾತನಾಡಿ, ಮಾದಕ ವಸ್ತು ವ್ಯಸನಿಗಳಾಗಿದ್ದಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಟೆಲಿ ಮೆನಸ್ ಎಂಬ 14416 ಉಚಿತ ಸಹಾಯವಾಣಿ ಆರಂಭಿಸಿದ್ದು, ಸಹಾಯವಾಣಿಗೆ ಕರೆ ಮಾಡಿ ಆಪ್ತಸಮಾಲೋಚನೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆಯ ಅಂಗವಾಗಿ ಮದ್ಯಪಾನ, ಮಾದಕವಸ್ತು, ತಂಬಾಕು ವಸ್ತುಗಳ ವ್ಯಸನ ಮುಕ್ತನಾಗುತ್ತೇನೆ ಎಂದು ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು.
ಬಳ್ಳಾರಿಯ ಸಂಗೀತ ಶಿಕ್ಷಕ ಕೆ.ದೊಡ್ಡಬಸವ ಗವಾಯಿ ಅವರಿಂದ ವ್ಯಸನಗಳ ಕುರಿತ ಸುಗಮ ಸಂಗೀತ ಕಾರ್ಯಕ್ರಮವು ಕೇಳುಗರ ತಲೆದೂಗುವಂತಿತ್ತು.
ಈ ಸಂದರ್ಭದಲ್ಲಿ ಮಹಾಣಗರ ಪಾಲಿಕೆಯ ಉಪಮೇಯರ್ ಡಿ.ಸುಕುಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವೀರೇಂದ್ರ ಕುಮಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ್ ದಾಸಪ್ಪನವರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಪ್ರದಸ ಗುರುರಾಜ.ವಿ.ಸಿ., ಸಿಬ್ಬಂದಿಗಳಾದ ಮಲ್ಲೇಶಪ್ಪ, ಹನುಮೇಶ್, ತಿಪ್ಪೇಸ್ವಾಮಿ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಇನ್ನಿತರರು ಉಪಸ್ಥಿತರಿದ್ದರು
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ