ಪ್ಯಾರಿಸ್, 28 ಜುಲೈ (ಹಿ.ಸ.) :
ಆ್ಯಂಕರ್:ಭಾರತ ಪುರುಷರ ಹಾಕಿ ತಂಡ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಪೂಲ್ ಬಿ ನಲ್ಲಿ ಕಣಕ್ಕಿಳಿದಿರುವ ಭಾರತ ತಂಡವು ತನ್ನ ಮೊದಲ ಪಂಧ್ಯದಲ್ಲಿ ನ್ಯೂಝಿಲೆಂಡ್ ತಂಡವನ್ನು 3-2 ಗೋಲುಗಳಿಂದ ಸೋಲಿಸಿದೆ.
ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಭಾರತ ತಂಡವು ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು ಎಂಬುದು ವಿಶೇಷ.
8ನೇ ನಿಮಿಷದಲ್ಲೇ ಗೋಲು ಬಾರಿಸಿ 0-1 ಅಂತರದಿಂದ ಮುನ್ನಡೆ ಸಾಧಿಸಿದ್ದ ನ್ಯೂಝಿಲೆಂಡ್ ತಂಡವು ಭಾರತದ ವಿರುದ್ಧ ಪಾರುಪತ್ಯ ಮೆರೆದಿತ್ತು. ಮೊದಲ ಎರಡು ಕ್ವಾರ್ಟರ್‌ಗಳಲ್ಲಿ ಭಾರತ ತಂಡವು ಹೆಚ್ಚು ತಪ್ಪು ಪಾಸ್‌ಗಳನ್ನು ನೀಡಿದ್ದರು. ಅಲ್ಲದೆ ಹೊಂದಾಣಿಕೆಯ ಆಟ ಮೂಡಿಬಂದಿರಲಿಲ್ಲ.
ಆದರೆ 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಮನ್ದೀಪ್ ಸಿಂಗ್ ಯಶಸ್ವಿಯಾದರು.
ಈ ಮೂಲಕ ಗೋಲುಗಳ ಅಂತರವನ್ನು 1-1 ಕ್ಕೇರಿಸಿದರು. ಗೋಲುಗಳು ಸಮಗೊಳ್ಳುತ್ತಿದ್ದಂತೆ ಭಾರತೀಯ ಆಟಗಾರರು ಪ್ರಬಲ ಪ್ರತಿದಾಳಿ ನಡೆಸಿತು. ಪರಿಣಾಮ 34ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ನೀಡಿದ ಪಾಸ್ ಅನ್ನು ಮನ್ದೀಪ್ ಗೋಲು ಬಲೆಯೊಳಗೆ ತಲುಪಿಸಿದರು.
2-1 ಅಂತರದಿಂದ ಮುನ್ನಡೆ ಸಾಧಿಸಿ ಭಾರತ ತಂಡವು ಉತ್ತಮ ಪ್ರದರ್ಶನ ಮುಂದುವರೆಸಿತು. ಆದರೆ 52ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ನ್ಯೂಝಿಲೆಂಢ್ ಸದುಪಯೋಗಪಡಿಸಿಕೊಂಡು ಗೋಲಿನ ಅಂತರವನ್ನು 2-2 ರಂತೆ ಸಮಗೊಳಿಸಿತು.
ಪಂದ್ಯವು ಇನ್ನೇನು ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಅನ್ನುವಷ್ಟರಲ್ಲಿ, ನ್ಯೂಝಿಲೆಂಡ್ ಆಟಗಾರ ಒಂದು ಫೌಲ್ ಮಾಡಿದರು. ಈ ತಪ್ಪಿನ ಪರಿಣಾಮ ಭಾರತಕ್ಕೆ 59ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಈ ಕೊನೆಯ ಅವಕಾಶವನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿದರು.
ಈ ಮೂಲಕ ಭಾರತ ತಂಡವು 3-2 ಗೋಲುಗಳ ಅಂತರದಿಂದ ನ್ಯೂಝಿಲೆಂಡ್ ವಿರುದ್ಧ ರೋಚಕ ಜಯ ಸಾಧಿಸಿತು. ಇದೀಗ ಶುಭಾರಂಭ ಮಾಡಿರುವ ಭಾರತ ತಂಡವು ಸೋಮವಾರ ನಡೆಯಲಿರುವ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ