ನವದೆಹಲಿ, 25 ಜುಲೈ (ಹಿ.ಸ.) :
ಆ್ಯಂಕರ್ : ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲೇ ೪ನೇ ಸ್ಥಾನದಲ್ಲಿದೆ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ನವದೆಹಲಿಯ ತಮ್ಮ ನಿವಾಸದಲ್ಲಿ ರಾಜಸ್ಥಾನ ಮುಖ್ಯಮಂತ್ರಿ ನೇತೃತ್ವದ ನಿಯೋಗ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆಕಾಂಕ್ಷೆಯಂತೆ ೨೦೩೦ರ ವೇಳೆಗೆ ನವೀಕರಿಸಬಹುದಾದ ಇಂಧನದ ಮೂಲಕ ೫೦೦ ಗೀಗಾ ವ್ಯಾಟ್ ಸಾಮರ್ಥ್ಯ ಸಾಧಿಸುವ ಗುರಿಯಿದ್ದು, ಆ ನಿಟ್ಟಿನಲ್ಲಿ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ಇಂಧನ ಸಚಿವಾಲಯ ರಾಜಸ್ಥಾನ ಸೇರಿದಂತೆ ಇಡೀ ದೇಶಕ್ಕೆ ಇಂಧನ ಭದ್ರತೆ ಖಾತರಿಪಡಿಸಲು ಬದ್ಧವಾಗಿದೆ ಎಂದು ತಿಳಿಸಿದರು.
ವಿದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಆಹಾರೋತ್ಪನ್ನಗಳ ಬೆಲೆ ನಿಯಂತ್ರಣದಲ್ಲಿದೆ. ಭಾರತ್ ಬೇಳೆಗಳು, ಭಾರತ್ ಅಕ್ಕಿ, ಭಾರತ್ ಹಿಟ್ಟು ಹೀಗೆ ಬಹುತೇಕ ಎಲ್ಲದರ ಬೆಲೆಗಳನ್ನು ಜಗತ್ತಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ನಿಯಂತ್ರಣದಲ್ಲಿಟ್ಟಿದ್ದೇವೆ ಎಂದು ಸಚಿವ ಪ್ರಲ್ಹಾದ್ ಜೋಶಿ ಸಮರ್ಥಿಸಿಕೊಂಡರು.
ಇಂಗಾಲ ಮಾರುಕಟ್ಟೆಗಳಿಂದ ಮೌಲ್ಯ ತೆರವುಗೊಳಿಸುವ ಕುರಿತಾದ ಮಹತ್ವದ ಕಾರ್ಯಾಗಾರದಲ್ಲಿ ಕೇಂದ್ರ ಇಂಧನ ಸಚಿವ ಪ್ರಹ್ಲಾದ್ ಜೋಶಿ ಪಾಲ್ಗೊಂಡಿದ್ದರು. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಹಸಿರು ಜಲಜನಕ ಮತ್ತು ಶುದ್ಧ ಇಂಧನ ವಲಯವನ್ನು ವೇಗಗೊಳಿಸುವ ಕುರಿತಾದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿರುವುದು ಸಂತಸ ತಂದಿದೆ. ಪರ್ಯಾಯ ಶುದ್ಧ ಇಂಧನ ವಲಯದತ್ತ ಸಾಗಲು ಕೈಗಾರಿಕೆಗಳಿಗೆ ಸರ್ಕಾರ ಹೇಗೆ ಮಾರುಕಟ್ಟೆ ಸೃಷ್ಟಿಸುತ್ತಿದೆ ಎನ್ನುವ ಕುರಿತಾದ ಒಳನೋಟಗಳನ್ನು ಹಂಚಿಕೊಂಡಿದ್ದೇವೆ ಎಂದಿದ್ದಾರೆ.
ಕೈಗಾರಿಕೆಗಳ ಪ್ರಸ್ತುತ ಕಾರ್ಯಕ್ಷಮತೆ, ಇತ್ತೀಚಿನ ಬಜೆಟ್ ನಲ್ಲಿನ ಸಾಧನೆ ಮತ್ತು ವ್ಯಾಪಾರ ಮಾದರಿಯಿಂದ ಭಾರತೀಯ ಇಂಗಾಲ ಮಾರುಕಟ್ಟೆಯ ಮಾದರಿಗೆ ಪರಿವರ್ತನೆ ಹೊಂದುವ ಮೇಲ್ವಿಚಾರಣೆ ಕುರಿತಂತೆಯೂ ಮಾತನಾಡಿದ್ದೇವೆ. ಹಸಿರು ಭವಿಷ್ಯವನ್ನು ನಿರ್ಮಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ ಎಂದು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ