ಕೊಪ್ಪಳ, 23 ಜುಲೈ (ಹಿ.ಸ.) :
ಆ್ಯಂಕರ್ : ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಆಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ ರೂ. 40,000 ಗಳ ದಂಡವಿಧಿಸಿ ಕೊಪ್ಪಳ ತ್ವರಿತ ವಿಲೇವಾರಿ ನ್ಯಾಯಾಲಯ (ಪೋಕ್ಸೋ)ದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಆದೇಶಿಸಿದ್ದಾರೆ.
ಪ್ರಕರಣದ ಬಾಧಿತಳ ದೂರದ ಸಂಬಂಧಿ ಆರೋಪಿ ಕುಮಾರ ಚವ್ಹಾಣ ಈತನು ಯಲಬುರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಸಂಗನಾಳ ಗ್ರಾಮದ ಬಾಧಿತಳ ಮನೆಯಲ್ಲಿ ಇರುತ್ತಿದ್ದನು. ಬಾಧಿತಳೊಂದಿಗೆ ಸಲುಗೆಯಿಂದ ಮಾತನಾಡುತ್ತ ಬಾಧಿತಳು ಮನೆಯಲ್ಲಿ ಒಬ್ಬಳೇ ಇದ್ದಾಗ ಅವರ ಇಚ್ಛೆಗೆ ವಿರುದ್ಧವಾಗಿ ಮನೆಯಲ್ಲಿ 2 ರಿಂದ 3 ಬಾರಿ ಲೈಂಗಿಕ ಅತ್ಯಾಚಾರ ಮಾಡಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಯಿಸುವುದಾಗಿ ಹೆದರಿಕೆ ಹಾಕಿರುತ್ತಾನೆ. 2021ರ ಆಗಸ್ಟ್ 22ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಸಂಗನಾಳ ಗ್ರಾಮದ ಬಾಧಿತಳ ಮನೆಯಿಂದ ತಾವಿಬ್ಬರೂ ಎಲ್ಲಿಯಾದರೂ ಹೋಗಿ ಮದುವೆಯಾಗೋಣ ಎಂದು ಪುಸಲಾಯಿಸಿ ಅಪಹರಣ ಮಾಡಿಕೊಂಡು ಹೋಗಿ ಅಲ್ಲಿ ಇಲ್ಲಿ ತಿರುಗಾಡಿ ಮುಧೋಳ ತಾಲೂಕ ಮಳಲಿ ಗ್ರಾಮದ ಸೀಮಾ ಜಮೀನು ಸ.ನಂ 122/2 ರಲ್ಲಿರುವ ಒಂದು ತಗಡಿನ ಶೆಡ್ಡಿನಲ್ಲಿ ಎರಡೂವರೆ ತಿಂಗಳು ಬಂಧನದಲ್ಲಿರಿಸಿ ಅಲ್ಲಿಯೂ ಹಲವಾರು ಸಲ ಬಲವಂತವಾಗಿ ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಯಲಬುರ್ಗಾ ಪೊಲೀಸರು ದೂರು ಸ್ವೀಕರಿಸಿದ್ದು, ಯಲಬುರ್ಗಾ ಗ್ರಾಮೀಣ ಪೆÇಲೀಸ್ ವೃತ್ತದ ಸಿಪಿಐ ಎಂ.ನಾಗರೆಡ್ಡಿ ಅವರು ಪ್ರಕರಣದ ತನಿಖೆಯನ್ನು ನಿರ್ವಹಿಸಿ, ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣವು ಸ್ಪೇ.ಎಸ್‍ಸಿ (ಪೋಕ್ಸೋ) ಸಂ: 02/2022ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ನ್ಯಾಯಾಲಯ ಆರೋಪಿ ಗಜೇಂದ್ರಗಡ ತಾಲ್ಲೂಕಿನ ನೆಲ್ಲೂರ ನಿವಾಸಿ ಕುಮಾರ ಚವ್ಹಾಣ ಇತನ ಮೇಲಿನ ಆರೋಪಣೆಗಳು ಸಾಬೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 40,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಕೊಪ್ಪಳದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಧೀಶರಾದ(ಪೋಕ್ಸೋ) ಕುಮಾರ ಡಿ.ಕೆ ಅವರು ತೀರ್ಪು ಹೊರಡಿಸಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು ಎಂದು ವಿಶೇಷ ಸರ್ಕಾರಿ ಅಭಿಯೋಜನಕರ ಕಚೇರಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ