ನವದೆಹಲಿ, 22 ಜುಲೈ (ಹಿ.ಸ.) :
ಆ್ಯಂಕರ್ : ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಲಿದೆ.ಇನ್ನು ಈ ಬಾರಿಯ ಅಧಿವೇಶನದಲ್ಲಿ ವಿಪತ್ತು ನಿರ್ವಹಣಾ ಕಾನೂನನ್ನ ತಿದ್ದುಪಡಿ ಮಾಡುವುದು ಸೇರಿದಂತೆ ೬ ಹೊಸ ಮಸೂದೆಗಳನ್ನು ಕೇಂದ್ರ ಸರ್ಕಾರ ಪರಿಚಯ ಮಾಡಲಿದೆ.
ಹಣಕಾಸು ಮಸೂದೆ, ವಿಪತ್ತು ನಿರ್ವಹಣಾ ಮಸೂದೆ, ಬಾಯ್ಲರ್ ಗಳ ಮಸೂದೆ, ಭಾರತೀಯ ವಾಯುಯಾನ ವಿಧೇಯಕಗಳ ಮಸೂದೆ, ಕಾಫಿ ಮಸೂದೆ, ರಬ್ಬರ್ ಮಸೂದೆ ಮಂಡನೆಯಾಗಲಿದೆ.
ಇನ್ನು ಮತ್ತೊಂದು ಕಡೆ ನೀಟ್ ಅಕ್ರಮ, ಕನ್ವರ್ ಯಾತ್ರೆ, ಮಣಿಪುರ ಸಂಘರ್ಷ, ರೈಲ್ವೆ ಸುರಕ್ಷತೆ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಆಡಳಿತ ಪಕ್ಷವನ್ನು ಕಟ್ಟಿ ಹಾಕಲು ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟ ಇಂಡಿಯಾ ಸನ್ನದ್ಧವಾಗಿದೆ.
20ಕ್ಕೂ ಅಧಿಕ ದಿನಗಳ ಕಾಲ ಈ ಸದನ ನಡೆಯಲಿದ್ದು ಆಡಳಿತ-ವಿಪಕ್ಷ ನಾಯಕರ ನಡುವೆ ಗದ್ದಲ-ಗಲಾಟೆ ನಡೆಯುವ ಎಲ್ಲಾ ಲಕ್ಷಣಗಳು ದಟ್ಟವಾಗಿವೆ. ಇದರಲ್ಲಿ ಮುಖ್ಯ ವಿಚಾರ ಏನಂದ್ರೆ ಮಂಗಳವಾರ ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದ್ದು ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ರಾಜ್ಯ ವಿಧಾನಸಭೆಯಲ್ಲಿ ಅಧಿವೇಶನ ಶುರುವಾಗಿ ಗದ್ದಲ ಗಲಾಟೆಗಳ ಬೆನ್ನಲ್ಲೇ ಈಗ ಸಂಸತ್ತಿನಲ್ಲಿ ಈ ವಾಗ್ವಾದಗಳು ನಡೆಯಲು ಕ್ಷಣಗಣನೆ ಶುರುವಾಗಿದೆ.
ಇಂದಿನಿಂದ ಸಂಸತ್ತಿನಲ್ಲಿ ಮುಂಗಾರು ಅಧಿವೇಶನ ಶುರುವಾಗಲಿದ್ದು, ಆಗಸ್ಟ್ 12 ರಂದು ಮುಕ್ತಾಯಗೊಳ್ಳಲಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಇದರ ಜೊತೆಗೆ ಕೇಂದ್ರ ಸರ್ಕಾರದ ವಿರುದ್ಧ ಹಲವು ಅಸ್ತ್ರಗಳನ್ನು ಇಟ್ಟುಕೊಂಡು ಮುಗಿಬೀಳಲು ವಿಪಕ್ಷಗಳು ಸಜ್ಜಾಗಿವೆ. ಆದ್ರೆ ಇಂದಿನ ಅಧಿವೇಶನಕ್ಕೂ ಮೊದಲು ನಿನ್ನೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸರ್ವಪಕ್ಷಗಳ ಸಭೆ ನಡೆಯಿತು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ / ಮನೋಹರ ಯಡವಟ್ಟಿ