ಸಂಡೂರು, 20 ಜುಲೈ (ಹಿ.ಸ.) :
ಆ್ಯಂಕರ್ : ಮಾಜಿ ಸಚಿವ, ಶಾಸಕ ಬಿ. ನಾಗೇಂದ್ರ ಅವರು ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರದ ಸತ್ಯಾಸತ್ಯತೆಯನ್ನು ಹೇಳಿದಲ್ಲಿ ಸಿಎಂ ಮತ್ತು ಡಿಸಿಎಂ ಅವರಿಗೆ ಸಂಕಷ್ಟ ಎದುರಾಗಿ ಸರ್ಕಾರ ಪತನವಾಗಲಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಿಳಿಸಿದ್ದಾರೆ.
ಸಂಡೂರು ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವು ತಮ್ಮ ಬುಡಕ್ಕೆ ಬರುತ್ತಿರುವ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನಗತ್ಯ ವಿಷಯಗಳ ಕುರಿತು ಮಾತನಾಡುತ್ತಿದ್ದಾರೆ. ಹಗರಣದಲ್ಲಿ ಬಿ. ನಾಗೇಂದ್ರ ಮತ್ತು ಬಸವರಾಜ ದದ್ದಲ್ ಅವರ ಪಾತ್ರವಿಲ್ಲ ಎಂದು ಪದೇ ಪದೇ ಸಮರ್ಥನೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲ, ಅಧಿಕಾರಿಗಳ ಮೇಲೆ ಸಂಪೂರ್ಣ ಹೊರೆ ಹೋರಿಸಿ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಲೋಕಸಭಾ ಚುನಾವಣೆಗೆ ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ಬಳಕೆಯಾಗಿದೆ. ಬಿಜೆಪಿ (ನಮ್ಮ) ಅಧಿಕಾರವಧಿಯಲ್ಲಿಯ ಹಗರಣಗಳ ತನಿಖೆಗೆಯನ್ನು ನಾವು ಸ್ವಾಗತಿಸುತ್ತೇವೆ. ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದು ತನಿಖೆ ನಡೆಸಲಿ ಎಂದರು.
ಕದ್ದ ಮಾಲು ವಾಪಸ್
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಳಸಿಕೊಂಡು ಹಣವನ್ನು ಆರೋಪಿಗಳು ವಾಪಸ್ಸು ಕೊಡುತ್ತಿರುವುದು ಕ್ಲೀನ್ ಚಿಟ್ ನೀಡಲು ನೆರವಾಗಲಿಕ್ಕೆನಾ? ಇದು ಒಂದರ್ಥದಲ್ಲಿ ಕದ್ದ ಮಾಲನ್ನು ವಾಪಸ್ ಮಾಡಿ, ತಪ್ಪಾಗಿದೆ ಎಂದು ಕೇಳಿದಂತೆ. ಹಾಗಾದಲ್ಲಿ ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿಲ್ಲವೇ? ಅಥವಾ ಭ್ರಷ್ಟಾಚಾರ ನಡೆದಿದೆ ಎಂದು ಒಪ್ಪಿಕೊಂಡಂತೆಯೇ? ಎಂದು ಪ್ರಶ್ನಿಸಿದರು.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ