ಮಾವು: ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳು
ಕೊಪ್ಪಳ, 16 ಏಪ್ರಿಲ್ (ಹಿ.ಸ): ಆ್ಯಂಕರ್ : ಮಾವು ಬೆಳೆಯಲ್ಲಿ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ಕೊಪ್ಪಳದ
ಮಾವು: ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳು


ಮಾವು: ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ರೈತರಿಗೆ ಸಲಹೆಗಳು


ಕೊಪ್ಪಳ, 16 ಏಪ್ರಿಲ್ (ಹಿ.ಸ):

ಆ್ಯಂಕರ್ : ಮಾವು ಬೆಳೆಯಲ್ಲಿ ಕೊಯ್ಲು ಮತ್ತು ಕೊಯ್ಲೋತ್ತರ ನಿರ್ವಹಣೆ ಕುರಿತು ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ರೈತರಿಗೆ ಸಲಹೆಗಳನ್ನು ನೀಡಲಾಗಿದೆ.

ಈ ಬಾರಿ ತಡವಾಗಿ ಮಾವಿನಲ್ಲಿ ಹೂ ಕಚ್ಚಿ-ನಂತರ ಕೀಟ ರೋಗಗಳ ಬಾಧೆಯಿಂದಾಗಿ ಹೂ/ಹೀಚು ಉದುರಿ ಹೋಗಿ ರೈತರಿಗೆ ನಷ್ಟ ಆಗುವಂತಾಯಿತು. ನಂತರದ ಏಪ್ರಿಲ್ ತಿಂಗಳಿನಲ್ಲಿ ಅಧಿಕ ತಾಪಮಾನದಿಂದಾಗಿಯೂ ಕಾಯಿ ಹೀಚು ಉದುರಿ ರೈತರಿಗೆ ಆತಂಕ ಉಂಟಾಯಿತು. ಈಗ ಮಾವು ಕಟಾವಿಗೆ ಬರುತ್ತಿದ್ದು, ಮಾವು ಬೆಳೆಗಾರರು ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಕೊಯ್ಲು ಮತ್ತು ಕೊಯ್ಲಿನ ನಂತರದ ನಿರ್ವಹಣೆ ಮಾಡಿದಲ್ಲಿ ಅಲ್ಪ ಸ್ವಲ್ಪ ಬೆಳೆಯಿಂದ ಸ್ವಲ್ಪ ಆದಾಯ ಪಡೆಯಬಹುದಾಗಿದೆ. ಹೂ/ಕಾಯಿ ಉದುರುತ್ತಿರುವಾಗ ಮತ್ತು ಜಿಗಿ ಹುಳುವಿನ ಕಾಟ ಹೆಚ್ಚಾಗಿ ಕಂಡು ಬಂದಾಗ ಕೃಷಿ ವಿಸ್ತರಣಾ ಶಿಕ್ಷಣ ಕೆಂದ್ರ, ಕೊಪ್ಪಳದಿಂದ ರೈತರ ತೋಟಗಳಿಗೆ ಭೇಟಿ ನೀಡಿ ಸಲಹೆ ನೀಡಲಾಗಿದ್ದು, ಕೆಲವರ ತೋಟದಲ್ಲಿ ಉತ್ತಮ ಫಸಲು ಕಂಡು ಬಂದಿದೆ.

ಹಣ್ಣಿನ ಆಕಾರ, ಗಾತ್ರ ಮತ್ತು ಬಣ್ಣ ಆಧರಿಸಿ ಹಣ್ಣುಗಳು ಕಟಾವಿಗೆ ಬಂದಿದೆ ಎಂದು ತಿಳಿಯಬಹುದು. ಹಣ್ಣುಗಳ ಭುಜಗಳು ಎತ್ತರವಾಗಿ ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ. ಸಾಮಾನ್ಯವಾಗಿ ತಳಿಯನ್ನಾಧರಿಸಿ ಕಾಯಿ ಕಚ್ಚಿದ ನಂತರ 15-16 ವಾರಗಳಲ್ಲಿ ಹಣ್ಣುಗಳು ಕಟಾವಿಗೆ ಬರುತ್ತವೆ. ಈ ಸಮಯದಲ್ಲಿ 6-8 ಕಾಯಿಗಳು ಉದುರಿ ಬೀಳುತ್ತವೆ. ಇವೆಲ್ಲವುಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಕೊಯ್ಲು ಮಾಡಬೇಕು.

ಮಾವಿನಲ್ಲಿ ಕೊಯ್ಲು ಮಾಡುವ ವಿಧಾನ:

ಉತ್ತಮಗಾತ್ರದ ಹಣ್ಣುಗಳನ್ನು ತಂಪಾದ ಹೊತ್ತಿನಲ್ಲಿ(ಬೆಳಿಗ್ಗೆ ಅಥವಾ ಸಾಯಂಕಾಲ) ಕಟಾವು ಮಾಡಬೇಕು. ಹಣ್ಣು ಕಟಾವು ಮಾಡುವಾಗ ಒಂದು ಇಂಚಿಗೂ ಹೆಚ್ಚು ಉದ್ದನೆಯ ದೇಟು ಇರುವಂತೆ ಕಟಾವು ಮಾಡಬೇಕು. ಕಟಾವು ಮಾಡಲು ಜೋಳಿಗೆ ಆಕಾರದ ಕೊಯ್ತ ಎನ್ನುವ ಸಾಧನವನ್ನು ಉಪಯೋಗಿಸಿ ಹಣ್ಣು ಕಟಾವು ಮಾಡಿದರೆ ಹಣ್ಣುಗಳು ಕೆಳಗೆ ಬಿದ್ದು ಹಾಳಾಗುವುದಿಲ್ಲ. ಕಟಾವಿನ ನಂತರ ಹಣ್ಣುಗಳನ್ನು ತಲೆ ಕೆಳಗಾಗಿ 4-6 ಗಂಟೆಗಳ ಕಾಲ ನೆರಳಿನಲ್ಲಿ ಶೇಖರಿಸಿಡಬೇಕು. ಇದರಿಂದಾಗಿ ಸೋನೆ (ಅಂಟುದ್ರವ) ಸೋರಿ ಹೋಗಿ ಹಣ್ಣುಗಳು ಕೆಡುವುದಿಲ್ಲ. ನಂತರ ಹಣ್ಣುಗಳನ್ನು ಶೇ.0.1 ರ ಟಿ.ಬಿ.ಝಡ್ ಅಥವಾ ಬಾವಿಷ್ಟಿನ್ ದ್ರಾವಣದಲ್ಲಿ 2-3 ನಿಮಿಷಗಳ ಕಾಲ ಮುಳುಗಿಸಿ ನಂತರ ಹೊರತೆಗೆದು ಸ್ವಚ್ಚವಾದ ಬಟ್ಟೆಯಿಂದ ಒರೆಸಿ ಗಾತ್ರಕ್ಕೆ ತಕ್ಕಂತೆ ವಿಂಗಡಿಸಿ ಶೇಖರಿಸಿಡಬೇಕು.

ಹಣ್ಣು ಮಾಗಿಸುವ ವಿಧಾನ:

ಸುಮಾರು 1 ಟನ್ ನಷ್ಟು ಹಣ್ಣುಗಳನ್ನು ಟ್ರೇನಲ್ಲಿ ಹಾಕಿ ಹಣ್ಣು ಮಾಗಿಸುವ ಟೆಂಟ್ಗಳಲ್ಲಿ ಗಾಳಿ ಆಡದಂತೆ ಇಟ್ಟು ನಂತರ ಇಥ್ರೇಲ್ ಎನ್ನುವ ದ್ರಾವಣದ ಸಹಾಯದಿಂದ ಹಣ್ಣುಗಳನ್ನು ಮಾಗಿಸಬಹುದಾಗಿದೆ. ಇಥ್ರೇಲ್ ಎನ್ನುವ ದ್ರಾವಣಕ್ಕೆ(2 ಮಿ.ಲೀ/ 1 ಘ.ಮೀ ಕೋಣೆ ಅಳತೆಗೆ ತಕ್ಕಂತೆ) 0.5 ಗ್ರಾಂ ಕಾಸ್ಟಿಕ್ ಸೋಡ ಬೆರೆಸಿ ಒಂದು ಬೀಕರನಲ್ಲಿ ಹಾಕಿ ಟೆಂಟ್ನೊಳಗಡೆ ಇಡಬೇಕು. ಈ ರೀತಿ ಉಪಚಾರದ 24 ಗಂಟೆಗಳ ನಂತರ ಟ್ರೇಗಳನ್ನು ಹೊರಗಡೆ ತೆಗೆದಿಡಬೇಕು. ಈ ರೀತಿ ಉಪಚರಿಸಿದ ಹಣ್ಣುಗಳು 4-5 ದಿನಗಳಲ್ಲಿ ಏಕರೂಪವಾಗಿ ಪಕ್ವಗೊಳ್ಳುತ್ತವೆ. ಇಂತಹ ಹಣ್ಣುಗಳು ಮಾರುಕಟ್ಟೆಗೆ ಸಾಗಿಸಲು ಯೋಗ್ಯವಾಗಿರುತ್ತವೆ.

ಇಂತಹ ಹಣ್ಣುಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಿ 45*26*17 ಸೆಂ.ಮೀ. ಅಥವಾ 32*27*10 ಸೆಂ.ಮೀ. ಗಾತ್ರದ ಪೆಟ್ಟಿಗೆಗಳಲ್ಲಿ ಮೆತ್ತನೆಯ ಹಾಸು (ಪೇಪರ ತುಂಡುಗಳು ಅಥವಾ ಕಟ್ಟಿಗೆ ಹೊಟ್ಟು) ಹಾಕಿ ದೂರದ ಊರುಗಳಿಗೆ ಸಾಗಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಸ್ತರಣಾ ಮುಂದಾಳು ಡಾ.ಎಂ.ವಿ.ರವಿ, ಮೊ.ನಂ. 9480247745 ಮತ್ತು ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ, ಮೊ.ನಂ. 9482672039 ಇವರನ್ನು ಸಂಪರ್ಕಿಸಬಹುದು.


 rajesh pande