ವಾಷಿಂಗ್ಟನ್,, 30 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅಮೆರಿಕದ 39ನೇ ಅಧ್ಯಕ್ಷರಾಗಿದ್ದ ಶತಾಯುಷಿ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಜಿಮ್ಮಿ ಕಾರ್ಟರ್ ನಿಧನರಾಗಿದ್ದಾರೆ.
ಅವರಿಗೆ 100 ವರ್ಷ ವಯಸ್ಸಾಗಿತ್ತು. 1977ರಿಂದ 1981ರವರೆಗೆ ಅವರು ಅಮೆರಿಕ ಅಧ್ಯಕ್ಷರಾಗಿದ್ದರು. ಜಾರ್ಜಿಯಾದ ಪ್ಲೇನ್ಸ್‌ನಲ್ಲಿರುವ ತಮ್ಮ ಕಾರ್ಟರ್ ಸೆಂಟರ್ ಫೌಂಡೇಶನ್ ಸ್ವಗ್ರಹದಲ್ಲಿ ಜಿಮ್ಮಿ ಕಾರ್ಟರ್ ಅವರು ಮೆದುಳಿನ ಕ್ಯಾನ್ಸರ್ ನಿಂದ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ಖಚಿತಪಡಿಸಿವೆ.
1978 ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಮೆರಿಕದ ಮೂರನೇ ಅಧ್ಯಕ್ಷ ಜಿಮ್ಮಿ ಕಾರ್ಟರ್. ಅಂದಿನ ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಮತ್ತು ಪ್ರಧಾನಿ ಮೊರಾರ್ಜಿ ದೇಸಾಯಿ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ನಡುವಣ ಬಾಂಧವ್ಯ ಹೆಚ್ಚಿಸಲು ಮಹತ್ವದ ಮಾತುಕತೆ ನಡೆಸಿದ್ದರು. ಇವರ ಗೌರವಾರ್ಥವಾಗಿ ಹರಿಯಾಣದ ಗ್ರಾಮಕ್ಕೆ ಕಾರ್ಟರ್‌ಪುರಿ ಎಂದು ಹೆಸರಿಡಲಾಗಿತ್ತು.
ಜಿಮ್ಮಿ ಕಾರ್ಟರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಅಧ್ಯಕ್ಷ ಜೋ ಬಿಡನ್, 'ಇಂದು ಅಮೆರಿಕ ಮತ್ತು ಜಗತ್ತು ಅಸಾಧಾರಣ ರಾಜಕಾರಣಿ ಮತ್ತು ಮಾನವತಾವಾದಿಯನ್ನು ಕಳೆದುಕೊಂಡಿದೆ' ಎಂದು ಹೇಳಿದರು.
ಜಿಮ್ಮಿ ಕಾರ್ಟರ್ ಅಕ್ಟೋಬರ್ 1, 1924 ರಂದು ಜನಿಸಿದರು. ಅವರು 1977 ರಿಂದ 1981 ರವರೆಗೆ ಅಮೆರಿಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 100 ನೇ ವಯಸ್ಸನ್ನು ತಲುಪಿದ ಏಕೈಕ ಅಮೆರಿಕದ ಮಾಜಿ ಅಧ್ಯಕ್ಷರಾಗಿದ್ದಾರೆ. 1978 ರಲ್ಲಿ ಅವರು ಮಧ್ಯಪ್ರಾಚ್ಯದಲ್ಲಿ ಶಾಂತಿಗಾಗಿ ಚೌಕಟ್ಟನ್ನು ರಚಿಸಿದ ಐತಿಹಾಸಿಕ ಕ್ಯಾಂಪ್ ಡೇವಿಡ್ ಒಪ್ಪಂದಗಳ ಮಧ್ಯಸ್ಥಿಕೆ ವಹಿಸಿದರು. ಅವರ ಕೊಡುಗೆಯಿಂದಾಗಿ, ಅವರಿಗೆ 2002 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು. ಅಮೆರಿಕದ ಇತಿಹಾಸದಲ್ಲಿ ಇದುವರೆಗೆ ಕೇವಲ ನಾಲ್ಕು ಅಧ್ಯಕ್ಷರು ಮಾತ್ರ ಈ ಗೌರವವನ್ನು ಪಡೆದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ