ಮಾಜಿ ಸಭಾಪತಿ ಸುದರ್ಶನ್ ಸಂತಾಪ
ಎಸ್.ಎಂ ಕೃಷ್ಣ ನಿಧನಕ್ಕೆ ಮಾಜಿ ಸಭಾಪತಿ ಸುದರ್ಶನ್ ಸಂತಾಪ
ಚಿತ್ರ: ಮಾಜಿ ಸಭಾಪತಿ ವಿ.ಆರ್ ಸುದರ್ಶನ್


ಕೋಲಾರ, ೧೦ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಕೋಲಾರ ಜಿಲ್ಲೆಯ ಕೆರೆಗಳ ಅಭಿವೃದ್ದಿಗೆ ಸಾವಿರ ಕೋಟಿ ನೀಡುವ ಮೂಲಕ ಜಿಲ್ಲೆಯ ಜನಮನದಲ್ಲಿ ಶಾಶ್ವತವಾಗಿ ನಿಂತ ಮಾಜಿ ಮುಖ್ಯಮಂತ್ರಿ ಎಸ್ಎಂ.ಕೃಷ್ಣ ನಾಲ್ಕು ಸದನಗಳಲ್ಲೂ ಕೆಲಸ ಮಾಡಿದ ಅನುಭವ ಹೊಂದಿದ್ದು, ಅವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಕಂಬನಿ ಮಿಡಿದಿದ್ದಾರೆ.

ವಿಧಾನಸಭೆ,ವಿಧಾನಪರಿಷತ್, ಲೋಕಸಭೆ, ರಾಜ್ಯಸಭೆ ಈ ನಾಲ್ಕು ಸದನಗಳಲ್ಲಿ ಕೆಲಸ ಮಾಡಿದ ಹೆಗ್ಗಳಿಕೆಗೆ ಎಸ್.ಎಂ.ಕೃಷ್ಣ ಪಾತ್ರರಾಗಿದ್ದಾರೆ, ವಿದೇಶಾಂಗ ಮಂತ್ರಿಯಾಗಿ, ರಾಜತಾಂತ್ರಿಕ ನಿಪುಣರಾಗಿದ್ದ ಅವರು ಬಹುಭಾಷಾ ಪಾಂಡಿತ್ಯ ಪಡೆದ ಅತ್ಯಂತ ಪ್ರಾಮಾಣಿಕ ರಾಜಕಾರಣಿಗಳಲ್ಲಿ ಒಬ್ಬರು ಎಂದು ತಿಳಿಸಿದ್ದಾರೆ.

ಕೋಲಾರ ಜಿಲ್ಲೆಗಳ ಕೆರೆಗಳ ಹೂಳೆತ್ತುವ ಅಗತ್ಯತೆ ಕುರಿತು ತಾವೂ ಮತ್ತು ಅಂದು ಸಚಿವರಾಗಿದ್ದ ವಿ.ಮುನಿಯಪ್ಪ ಅವರು ಮನವರಿಕೆ ಮಾಡಿಕೊಟ್ಟಾಗ ಸಾವಿರ ಕರೆಗಳ ಅಭಿವೃದ್ದಿಗೆ ಸಾವಿರ ಕೋಟಿ ರೂಗಳನ್ನು ಬಿಡುಗಡೆ ಮಾಡಿದ್ದನ್ನು ಸ್ಮರಿಸಿದ್ದಾರೆ.

ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆ ವಿಭಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಾದರೂ ಆಗ ಜನಗಣತಿ ಹಾಗೂ ಕ್ಷೇತ್ರ ವಿಂಗಡಣೆ ಪ್ರಕ್ರಿಯೆ ಇದ್ದ ಕಾರಣ ಮಾಡಲಾಗಲಿಲ್ಲ. ನಂತರ ಸಿಎಂ ಆದ ಕುಮಾರಸ್ವಾಮಿ ಈ ಕಾರ್ಯ ಮಾಡಿದರು ಎಂದು ಸ್ಮರಿಸಿದ್ದಾರೆ.

ಕಳೆದ ೧೯೯೯ ರಲ್ಲಿ ಜಿಲ್ಲೆಯ ಕುರುಡುಮಲೆಯಲ್ಲಿ ಪಾಂಚಜನ್ಯ ಯಾತ್ರೆಗೆ ಚಾಲನೆ ನೀಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದ ಕೃಷ್ಣ ಅವರು, ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ನಾನು ಅವರೊಂದಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅದೃಷ್ಟ ನನ್ನದಾಗಿತ್ತು ಎಂದು ತಿಳಿಸಿದ್ದಾರೆ.

ವೇಮಗಲ್ ಉಪಚುನಾವಣೆ ಸಂದರ್ಭದಲ್ಲಿ ಜಿಲ್ಲೆಯ ಜನತಾಪರಿವಾರದ ಎಲ್ಲಾ ಮುಖಂಡರನ್ನು ಕಾಂಗ್ರೆಸ್ಗೆ ಸೇರಿಸಿಕೊಂಡು ಪಕ್ಷವನ್ನು ಬಲಗೊಳಿಸಿದ್ದ ಕೃಷ್ಣ ಅವರ ಸಾವಿನಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದ್ದು, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸುದರ್ಶನ್ ಪ್ರಾರ್ಥಿಸಿದ್ದಾರೆ.

ಚಿತ್ರ: ಮಾಜಿ ಸಭಾಪತಿ ವಿ.ಆರ್ ಸುದರ್ಶನ್

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande