ಕೋಲಾರ, ೧೩ ಜನವರಿ (ಹಿ.ಸ) :
ಆ್ಯಂಕರ್ : ವಿದ್ಯಾರ್ಥಿಗಳ ಜಾಣ್ಮೆಯನ್ನು ಗುರುತಿಸಲು ಶಾಲೆಯಲ್ಲಿ ನಡೆಯುವ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ತಿಳಿಸಿದರು.
ನಗರದ ಪಾಲ್ಸಂದ್ರ ಬಡಾವಣೆಯ ನಳಂದ ವಿದ್ಯಾನಿಕೇತನ ಶಾಲೆಯ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಎರಡನೇ ವರ್ಷದ ಸಂಕ್ರಾAತಿ ಮಕ್ಕಳ ಸಂತೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಮಕ್ಕಳಿಗೆ ಪಠ್ಯ ಚಟುವಟಿಕೆಗಳ ಜೊತೆಗೆ ಸಹಪಠ್ಯ ಚಟುವಟಿಕೆಗಳನ್ನು ನಡೆಸುವುದರಿಂದ ಅವರ ಬೌದ್ಧಿಕ ಜ್ಞಾನ ವಿಕಾಸ ಮತ್ತು ವ್ಯಕ್ತಿತ್ವ ರೂಪುಗೊಳ್ಳುವುದಕ್ಕೆ ಸಹಕಾರಿಯಾಗುತ್ತದೆ. ಅಂದರೆ ಮಕ್ಕಳಲ್ಲಿ ಲೆಕ್ಕಾಚಾರ ಪ್ರವೃತ್ತಿ ಹಾಗೂ ಗ್ರಾಹಕರೊಂದಿಗೆ ವರ್ತಿಸುವ ವ್ಯವಹಾರ ಜ್ಞಾನ ಹೆಚ್ಚುತ್ತದೆ ಎಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶ ಸುನಿಲ್ ಎಸ್.ಹೊಸಮನಿ ಮಾತನಾಡಿ, ಇತ್ತೀಚಿಗೆ ವಿದ್ಯಾರ್ಥಿಗಳು ವಿವಿಧ ಮಾಧ್ಯಮಗಳಿಂದ ಪ್ರಭಾವಿತರಾಗಿ ಕಾನೂನು ಕೈಗೆ ತೆಗೆದುಕೊಳ್ಳುವ ಹಂತಕ್ಕೆ ಬರುತ್ತಿದ್ದಾರೆ. ಇದು ಅತ್ಯಂತ ಕಳವಳಕಾರಿಯಾಗಿದೆ. ಇಂತಹ ಪರಿಸ್ಥಿತಿಯಿಂದ ಮಕ್ಕಳನ್ನು ಹೊರತರಬೇಕಾದ್ದು ಪ್ರತಿಯೊಬ್ಬ ಶಿಕ್ಷಕರ ಹಾಗೂ ಪೋಷಕರ ಕರ್ತವ್ಯವಾಗಿದೆ. ಮಕ್ಕಳಿಗೆ ಕಾನೂನು ಮತ್ತು ಕಾಯ್ದೆಗಳ ಅರಿವು ಮೂಡಿಸುವುದು ಹಿರಿಯರಾದ ನಮ್ಮೆಲ್ಲರ ಜವಾಬ್ದಾರಿ ಎಂದರು.
ಮಕ್ಕಳ ಸಂತೆಯಲ್ಲಿ ಬಗೆ ಬಗೆಯ ಸಿಹಿ ತಿಂಡಿಗಳು, ಬೇಲ್‌ಪುರಿ, ಬೋಂಡಾ, ಬಜ್ಜಿ, ಕಾಫಿ, ಟೀ, ಗೋಬಿ ಮಂಚೂರಿ, ಸ್ವೀಟ್ ಕಾರ್ನ್, ತರಕಾರಿ ಹಣ್ಣುಗಳು, ಗೃಹಪಯೋಗಿ ವಸ್ತುಗಳು, ವೈವಿಧ್ಯಮಯ ಗಿಡಗಳು ಸೇರಿದಂತೆ ಹಲವು ವಸ್ತುಗಳನ್ನು ಮಾರಾಟ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಉಮಾ, ಶಾಲೆಯ ಕಾರ್ಯದರ್ಶಿ ಟಿ.ಆರ್. ಜಯರಾಮ್, ಪ್ರಾಂಶುಪಾಲ ಡಾ.ಹೆಚ್.ಗೌರಿನಾಯ್ಡು, ಶಾಲೆಯ ಖಜಾಂಚಿ ಮಮತಾ ಜಯರಾಮ್ ಭಾಗವಹಿಸಿದ್ದರು.
ಚಿತ್ರ : ಕೋಲಾರ ನಗರದ ಪಾಲಸಂದ್ರ ಬಡಾವಣೆಯ ನಳಂದ ವಿದ್ಯಾನಿಕೇತನ ಶಾಲೆಯಲ್ಲಿ ಸಂಕ್ರಾ0ತಿ ಅಂಗವಾಗಿ ನಡೆದ ಮಕ್ಕಳ ಸಂತೆಯನ್ನು ಜಿಲ್ಲಾ ಮತ್ತು ಸೆಷನ್ಸ್ ಪ್ರಧಾನ ನ್ಯಾಯಾಧೀಶರಾದ ಮಂಜುನಾಥ್ ಉದ್ಘಾಟಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್