ನವದೆಹಲಿ, 07 ನವೆಂಬರ್(ಹಿ.ಸ.) :
ಆ್ಯಂಕರ್ : ದೀರ್ಘಕಾಲದ ಬೇಡಿಕೆಯನ್ನು ಈಡೇರಿಸುವ ನಿಟ್ಟಿನಲ್ಲಿ ’ಒಂದು ಶ್ರೇಣಿ ಒಂದು ಪಿಂಚಣಿ’ ಯೋಜನೆ ಜಾರಿಗೊಳಿಸುವುದು ಮಹತ್ವದ ನಿರ್ಧಾರವಾಗಿದ್ದು, ಇದು ನಮ್ಮ ಯೋಧರಿಗೆ ರಾಷ್ಟ್ರ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಒಆರ್‌ಒಪಿ ಯೋಜನೆ ೧೦ ವರ್ಷ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಅವರು, ತಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ರಾಷ್ಟ್ರವನ್ನು ರಕ್ಷಿಸುವಲ್ಲಿ ತಮ್ಮ ಪ್ರಾಣವನ್ನು ಪಣವಿಟ್ಟು ಹೋರಾಡಿದ ಹಿರಿಯ ಹಾಗೂ ಮಾಜಿ ಯೋಧರ ಶೌರ್ಯ ಮತ್ತು ತ್ಯಾಗಕ್ಕೆ ಸಲ್ಲಿಸುವ ಗೌರವವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ದಶಕದಲ್ಲಿ ಈ ಉಪಕ್ರಮದಿಂದ ಲಕ್ಷಾಂತರ ಪಿಂಚಣಿದಾರರು ಮತ್ತು ಅವರ ಕುಟುಂಬಗಳಿಗೆ ಪ್ರಯೋಜನವಾಗಿದೆ. ಒಆರ್‌ಒಪಿ ಸಶಸ್ತ್ರ ಪಡೆಗಳ ಯೋಧರ ಯೋಗಕ್ಷೇಮ ಕಾಪಾಡುವ ಸರ್ಕಾರದ ಬದ್ಧತೆಯ ಪ್ರತೀಕವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಬಲವರ್ಧನೆಗೆ ಸರ್ಕಾರ ಸದಾ ಸಿದ್ದವಿದ್ದು, ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಳ್ಳಲಿದೆ. ರಾಷ್ಟ್ರ ಮತ್ತು ಪ್ರಜೆಗಳಿಗಾಗಿ ಸೇವೆ ಸಲ್ಲಿಸುತ್ತಿರುವವರ ಕಲ್ಯಾಣಕ್ಕೆ ಸರ್ಕಾರ ಬದ್ಧ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್