ಕೋಲಾರ, 0೪ ನವೆಂಬರ್ (ಹಿ.ಸ) :
ಆ್ಯಂಕರ್ : ತಾಲ್ಲೂಕಿನ ವೇಮಗಲ್ ಪಟ್ಟಣದಲ್ಲಿ ಜಿಲ್ಲೆಯಲ್ಲೇ ಮಾದರಿ ಎನ್ನುವ ರೀತಿ ನ.೧೦ ರಂದು ಅದ್ದೂರಿ ಕನ್ನಡ ರಾಜ್ಯೋತ್ಸವದೊಂದಿಗೆ ತಾವೇ ನಿರ್ಮಿಸಿರುವ ‘ಬಡವರ ಮಕ್ಳು ಬೇಳಿಬೇಕು ಕಣ್ರಯ್ಯ’ ಕನ್ನಡ ಚಲನಚಿತ್ರ ಟೀಸರ್ ಪ್ರೀ ಲಾಂಚಿಂಗ್ ಮಾಡಲಾಗುವುದು ಎಂದು ಜಿಪಂ ಮಾಜಿ ಅಧ್ಯಕ್ಷ ಹಾಗೂ ಚಿತ್ರದ ನಿರ್ಮಾಪಕ ಸಿ.ಎಸ್.ವೆಂಕಟೇಶ್ ತಿಳಿಸಿದರು.
ವೇಮಗಲ್ ಪಟ್ಟಣದ ತಮ್ಮ ನಿವಾಸದಲ್ಲಿ ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ನ.೧೦ ರಂದು ಸಂಜೆ ೬ ಗಂಟೆಗೆ ವೇಮಗಲ್‌ನ ಸೀತಿ ರಸ್ತೆಯಲ್ಲಿರುವ ತಾಲ್ಲೂಕು ಕ್ರೀಡಾಂಗಣದಲ್ಲಿ ಹಲವಾರು ಸಿನಿತಾರೆಯರು ೨೦ ಸಾವಿರಕ್ಕೂ ಹೆಚ್ಚು ಅಭಿಮಾನಿಗಳ ಸಮ್ಮುಖದಲ್ಲಿ ಸದರಿ ಚಿತ್ರದ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ನಡೆದಿದೆ ಎಂದು ತಿಳಿಸಿದರು.
ತಮ್ಮ ತಂದೆ, ತಾಯಿಯ ಆಶೀರ್ವಾದದೊಂದಗೆ ಶ್ರೀರಾಮ ಪ್ರೋಡಕ್ಷನ್ಸ್‌ನಡಿ ಈ ಚಿತ್ರದ ಚಿತ್ರೀಕರಣ ಶರವೇಗದಿಂದ ಮುಂದುವರೆದಿದ್ದು, ಆದಷ್ಟು ಶೀಘ್ರ ಚಿತ್ರ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಗ್ರಾಮೀಣ ಸೊಗಡಿನ ಬಹುನಿರೀಕ್ಷಿತ ತಮ್ಮ ಈ ಚಿತ್ರದಲ್ಲಿ ಹಲವಾರು ಹಿರಿಯ ಕಲಾವಿದರು ನಟಿಸಿದ್ದಾರೆ, ಚಿತ್ರವನ್ನು ನೋಡಿ ಬೆಂಬಲ ನೀಡಬೇಕು, ಕಲಾವಿದರ ಬದುಕು ಹಸನಾಗಲು ಸಹಕಾರಿಸಬೇಕು ಎಂದು ಮನವಿ ಮಾಡಿದರು.
ವೇಮಗಲ್‌ನಲ್ಲಿ ಕಳೆದ ೭ ವರ್ಷಗಳಿಂದ ಅತ್ಯಂತ ವಿಜೃಂಭಣೆಯಿಂದ ರಾಜ್ಯೋತ್ಸವ ಮಾಡಿಕೊಂಡು ಬಂದಿದ್ದೇವೆ, ಈ ಬಾರಿ ಮತ್ತಷ್ಟು ಅದ್ದೂರಿಯಾಗಿ ನಡೆಸುವ ಮೂಲಕ ಜಿಲ್ಲೆಗೆ ಮಾದರಿಯಾಗುವಂತೆ ಕಾರ್ಯಕ್ರಮಗಳನ್ನು ರೂಪಿಸಲು ಈಗಾಗಲೇ ಗ್ರಾಮದ ಮುಖಂಡ ಮಂಜುನಾಥ್ ಅಧ್ಯಕ್ಷತೆಯಲ್ಲಿ ರಾಜ್ಯೋತ್ಸವ ಸಮಿತಿ ರಚಿಸಿದ್ದು, ಪದಾಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೆ ನಟ ಧನಂಜಯ್ ಆಗಮಿಸಲು ಒಪ್ಪಿದ್ದಾರೆ, ಈ ನಡುವೆ ಶಿವರಾಜ್‌ಕುಮಾರ್, ಸುದೀಪ್,ಗಣೇಶ್ ಅವರನ್ನೂ ಆಹ್ವಾನಿಸಿದ್ದು, ಸೋಮವಾರ ಸಂಜೆ ಅವರ ಒಪ್ಪಿಗೆ ಸಿಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಗಳು ನ.೧೦ರ ಬೆಳಗ್ಗೆ ೯ ಗಂಟೆಗೆ ವೇಮಗಲ್ ಬಸ್ ನಿಲ್ದಾಣದಲ್ಲಿ ಧ್ವಜರೋಹಣದೊಂದಗೆ ಆರಂಭಗೊಳ್ಳಲಿದ್ದು, ೯-೩೦ ಕ್ಕೆ ಭುವನೇಶ್ವರಿ ಪಲ್ಲಕ್ಕಿ, ಪೂಜೆ, ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.
೧೦ ಗಂಟೆಗೆ ವಿಶೇಷ ಅಲಂಕಾರಗೊಂಡ ಆಟೋಗಳಿಗೆ ನಿಲ್ದಾಣದಲ್ಲಿ ಪೂಜೆ ನಡೆಯಲಿದ್ದು, ವಿಶೇಷ ಕಲಾತಂಡಗಳು, ಆಟೋಗಳ ಭವ್ಯ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಬರಲಿದೆ ಎಂದು ತಿಳಿಸಿದರು.
ಗ್ರಾಮದ ಎಲ್ಲಾ ಪ್ರಮುಖ ರಸ್ತೆಗಳಲ್ಲೂ ದೀಪಲಂಕಾರ ಮಾಡಲಿದ್ದು, ಸಂಜೆ ೬ ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ, ಇಲ್ಲಿ ಚಲನಚಿತ್ರದ ಟೀಸರ್ ಬಿಡುಗಡೆ ಜತೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ಇದಕ್ಕೆ ಖ್ಯಾತ ಚಲನಚಿತ್ರ ನಟರು, ಗಣ್ಯರು ಸಾಕ್ಷಿಯಾಗಲಿದ್ದಾರೆ ಎಂದು ವಿವರಿಸಿದರು.
ಕಳೆದ ೮ ವರ್ಷಗಳಿಂದ ಯಾವುದೇ ದೇಣಿಗೆ ಸಂಗ್ರಹಿಸದೇ ತಾವೇ ಮುಂದಾಳತ್ವ ವಹಿಸಿ ವೇಮಗಲ್ ಪಟ್ಟಣದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದು, ಈ ಬಾರಿ ಮತ್ತಷ್ಟು ಉತ್ತಮ ರೀತಿಯಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ದತೆ ನಡೆಸಲಾಗಿದೆ ಮತ್ತು ಅದಕ್ಕಾಗಿ ಮಂಜುನಾಥ್ ಅಧ್ಯಕ್ಷತೆಯಲ್ಲಿ ಸಮಿತಿಯನ್ನೂ ರಚಿಸಲಾಗಿದೆ ಎಂದು ತಿಳಿಸಿದರು.
ಗೌಡರ ಚಿಕ್ಕಮುನಿಯಪ್ಪ, ಯಜಮಾನ್ ಅಶ್ವಥಪ್ಪ, ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ಎಸ್. ಮಂಜುನಾಥ್, ತಿಗಳ ಜನಾಂಗದ ಅಧ್ಯಕ್ಷ ರಾಜೇಂದ್ರ ಪ್ರಸಾದ್, ವಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶ್ರೀನಿವಾಸ್, ರಾಜ್ಯ ನಿರ್ದೇಶಕ ವೆಂಕಟೇಶ್ (ವಿನಯ್) ಕಸ್ತೂರಿ ಬಳಗ ರಾಜಕುಮಾರ್, ಕಾಂತರಾಜ್, ಪೋಲಿಸ್ ಚಲಪತಿ, ಜಮಾತೆ ಕಾರ್ಯದರ್ಶಿ ಜಮೀರ್, ದಲಿತ ಮುಖಂಡರಾದ ಕಲ್ವಮಂಜಲಿ ಶಿವಣ್ಣ, ಮುನಿರಾಜು, ವಿಜಿಕುಮಾರ್, ರವಿ, ಕರ್ನಾಟಕ ಹಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಬಾಬಣ್ಣ, ವಕೀಲರಾದ ನಾಗೇಶ್, ವೆಂಕಟೇಶ್‌ಗೌಡ, ಹರಿಣಿ ಮಂಜುನಾಥ್,ರವಿಚಂದ್ರ, ಶಂಕರ್, ಕಾಂತರಾಜ್, ಸುಬ್ರಮಣಿ, ಸಮಾಜಸೇವಕ ಆರ್.ಎಂ.ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ - ಕೋಲಾರ ಜಿಪಂ ಮಾಜಿ ಅಧ್ಯಕ್ಷರಾದ ಸಿ.ಎಸ್ ವೆಂಕಟೇಶ್ ನಿರ್ಮಾಪಕರಾಗಿರುವ ‘ಬಡವರ ಮಕ್ಳು ಬೆಳೆಬೇಕು ಕಣ್ರಯ್ಯ’ ಚಲನ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್