ಲಕ್ನೋ, 21 ನವೆಂಬರ್ (ಹಿ.ಸ.) :
ಆ್ಯಂಕರ್ : ಡಬಲ್ ಡೆಕ್ಕರ್ ಬಸ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐದು ತಿಂಗಳ ಮಗು ಸೇರಿ ಐವರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅಲಿಗಢದ ಯಮುನಾ ಎಕ್ಸ್ಪ್ರೆಸ್ ವೇನಲ್ಲಿ ಘಟನೆ ನಡೆದಿದೆ. ನವದೆಹಲಿಯಿಂದ ಅಜಂಗಢಕ್ಕೆ ತೆರಳುತ್ತಿದ್ದ ಬಸ್ ಹಿಂಬದಿಯಿಂದ ಟ್ರಕ್ಗೆ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ. ಪರಿಣಾಮ ಬಸ್ ಛಿದ್ರಗೊಂಡಿದ್ದು, ಮೃತದೇಹಗಳು ಮತ್ತು ಪ್ರಯಾಣಿಕರು ಒಳಗೆ ಸಿಲುಕಿಕೊಂಡಿದ್ದಾರೆ.
ಸ್ಥಳೀಯರು ಬಸ್ಸಿನ ಗಾಜುಗಳನ್ನು ಒಡೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜೇವರ್ನ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ಕಳುಹಿಸಲಾಗಿದೆ. ಮೃತರ ಪೈಕಿ ಮೂರು ಶವಗಳ ಗುರುತು ಪತ್ತೆ ಹಚ್ಚಿದ್ದು, ಇಬ್ಬರ ಗುರುತು ಪತ್ತೆಯಾಗಿಲ್ಲ.
ಬಸ್ ಫೈಜಾಬಾದ್ ಮೂಲದ ಟ್ರಾವೆಲ್ಸ್ ಕಂಪನಿಗೆ ಸೇರಿದೆ. ತಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್