ಮುಂಬೈ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ದೀಪಾವಳಿ ಹಬ್ಬದಂದು ಅಜಯ್ ದೇವಗನ್ ಅಭಿನಯದ ‘ಸಿಂಗಂ ಅಗೇನ್’ ಮತ್ತು ಕಾರ್ತಿಕ್ ಆರ್ಯನ್ ಅಭಿನಯದ ‘ಭೂಲ್ ಭುಲಯ್ಯ 3’ ಚಿತ್ರಗಳು ತೆರೆಗೆ ಬರುತ್ತಿವೆ. ಪಿವಿಆರ್-ಐನಾಕ್ಸ್ 60% ಶೋಗಳನ್ನು ‘ಸಿಂಗಂ ಅಗೇನ್’ಗೆ ಮೀಸಲಿಟ್ಟಿದೆ. ಎರಡೂ ಚಿತ್ರಗಳು ಭಾರಿ ನಿರೀಕ್ಷೆಯನ್ನು ಹೊಂದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಾವುದು ಗೆಲ್ಲಲಿದೆ ಎಂಬ ಕುತೂಹಲ ಮೂಡಿದೆ. ‘ಸಿಂಗಂ ಅಗೇನ್’ನಲ್ಲಿ ಸಾಹಸ- ರೋಮಾಂಚಕ ಇದ್ದರೆ, ‘ಭೂಲ್ ಭುಲಯ್ಯ 3’ ಭಯಾನಕ ಚಿತ್ರವಾಗಿದೆ.
‘ಸಿಂಗಂ ಅಗೇನ್’ ಚಲನಚಿತ್ರಕ್ಕೆ ರೋಹಿತ್ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಈ ಚಲನಚಿತ್ರದಲ್ಲಿ ಸಾಹಸ- ರೋಮಾಂಚಕ ಕಥೆ ಇದೆ. ಅಜಯ್ ದೇವಗನ್, ಕರೀನಾ ಕಪೂರ್ ಖಾನ್, ಅರ್ಜುನ್ ಕಪೂರ್ ಅವರು ಪ್ರಮುಖ ಪಾತ್ರ ಮಾಡಿದ್ದಾರೆ. ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್, ಸಲ್ಮಾನ್ ಖಾನ್, ರಣವೀರ್ ಸಿಂಗ್ ಮುಂತಾದವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಟ್ರೇಲರ್ ಧೂಳೆಬ್ಬಿಸಿದೆ.
ಈ ಚಲನಚಿತ್ರಕ್ಕೆ ಪ್ರೇಕ್ಷಕರ ವಲಯದಿಂದ ಭಾರಿ ಬೇಡಿಕೆ ಇರುವ ಕಾರಣದಿಂದ ಶೇ. 60ರಷ್ಟು ಶೋಗಳನ್ನು ಮೀಸಲಿಡುವ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ. ಪಿವಿಆರ್-ಐನಾಕ್ಸ್ ಹೊರತುಪಡಿಸಿ ಇನ್ನುಳಿದ ಮಲ್ಟಿಪ್ಲೆಕ್ಸ್ಗಳು ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲಿವೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಈ ಚಲನಚಿತ್ರ ಭರ್ಜರಿ ನಿರೀಕ್ಷೆ ಸೃಷ್ಟಿ ಮಾಡಿದೆ. ಆದ್ದರಿಂದ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಮೊತ್ತದ ಗಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.
ಅದೇ ದಿನ ‘ಭೂಲ್ ಭುಲಯ್ಯ 3’ ಚಲನಚಿತ್ರ ತೆರೆ ಕಾಣಲಿದೆ. ಇದು ಭಯಾನಕ ಚಲನಚಿತ್ರವಾಗಿದೆ. ಈ ವರ್ಷ ‘ಮುಂಜ್ಯ’, ‘ಸ್ತ್ರೀ 2’ ಮುಂತಾದ ಭಯಾನಕ ಚಲನಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ ‘ಭೂಲ್ ಭುಲಯ್ಯ 3’ ಚಲನಚಿತ್ರದ ಮೇಲೆ ಜನರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಮಾಧುರಿ ದೀಕ್ಷಿತ್, ವಿದ್ಯಾ ಬಾಲನ್, ತೃಪ್ತಿ ದಿಮ್ರಿ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಒಂದು ವೇಳೆ ‘ಸಿಂಗಂ ಅಗೇನ್’ ಚಲನಚಿತ್ರ ಎಲ್ಲ ಪರದೆಗಳನ್ನು ಆಕ್ರಮಿಸಿಕೊಂಡರೆ ಅದರಿಂದ ‘ಭೂಲ್ ಭುಲಯ್ಯ 3’ ಚಲನಚಿತ್ರಕ್ಕೆ ತೊಂದರೆ ಆಗಲಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್