ಇಸ್ಲಾಮಾಬಾದ್, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪಾಕಿಸ್ತಾನ್ ತಂಡದ ಸೀಮಿತ ಓವರ್ಗಳ ತಂಡಗಳ ಮುಖ್ಯ ಕೋಚ್ ಹುದ್ದೆಗೆ ಗ್ಯಾರಿ ಕರ್ಸ್ಟನ್ ರಾಜೀನಾಮೆ ನೀಡಿದ್ದಾರೆ. ಕರ್ಸ್ಟನ್ ಅವರು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಕೆಲವು ಆಟಗಾರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಹೊಂದಿದ್ದು, ಹೀಗಾಗಿ ಕೋಚ್ ಹುದ್ದೆಯನ್ನು ತೊರೆದಿದ್ದಾರೆ ಎಂದು ವರದಿಯಾಗಿದೆ.
ಇದಕ್ಕೂ ಮುನ್ನವೇ ಕರ್ಸ್ಟನ್ ಕೋಚ್ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ ಎನ್ನಲಾಗಿತ್ತು. ಅಲ್ಲದೆ ನವೆಂಬರ್ 4 ರಂದು ಮೆಲ್ಬೋರ್ನ್‌ನಲ್ಲಿ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಹಾಗೂ ಟಿ20 ಸರಣಿಗಾಗಿ ಪಾಕಿಸ್ತಾನ್ ತಂಡದೊಂದಿಗೆ ಆಸ್ಟ್ರೇಲಿಯಾಕ್ಕೆ ಪ್ರಯಾಣಿಸುತ್ತಿಲ್ಲ. ಹೀಗಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಕೂಡ ಬದಲಿ ಕೋಚ್ ಆಯ್ಕೆ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದೆ ವರದಿಯಾಗಿತ್ತು.
ಇದೀಗ ಈ ವರದಿ ನಿಜವಾಗಿದ್ದು, ಕೇವಲ 6 ತಿಂಗಳಲ್ಲೇ ಪಾಕಿಸ್ತಾನ್ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಗ್ಯಾರಿ ಕರ್ಸ್ಟನ್ ಕೆಳಗಿಳಿದಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಆಟಗಾರನ ಈ ನಿರ್ಧಾರಕ್ಕೆ ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ನಡುವೆ ಭಿನ್ನಾಭಿಪ್ರಾಯ.
ಪಾಕ್ ತಂಡದ ಉನ್ನತ-ಕಾರ್ಯಕ್ಷಮತೆಯ ತರಬೇತುದಾರರನ್ನಾಗಿ ಡೇವಿಡ್ ರೀಡ್ ಅವರನ್ನು ನೇಮಿಸುವಂತೆ ಕರ್ಸ್ಟನ್ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದ್ದರು. ಆದರೆ ಈ ಕೋರಿಕೆಗೆ ಪಾಕ್ ಕ್ರಿಕೆಟ್ ಮಂಡಳಿ ಒಲವು ತೋರಿಲ್ಲ. ಇದರಿಂದ ಪಿಸಿಬಿ ಹಾಗೂ ಕೋಚ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್