ಅ.​ 15ರಂದು ನಯಾಬ್​ ಸೈನಿ ಹರಿಯಾಣದ ಮುಖ್ಯಮಂತ್ರಿ ಸಾಧ್ಯತೆ
ಚಂಡೀಗಢ, 11 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ನಯಾಬ್​​ ಸಿಂಗ್​ ಸೈನಿ ಅಕ್ಟೋಬರ್​ 15ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರು, ರಾಜ್ಯ ಬಿಜೆಪಿಯ ಪ್ರಮುಖರು ಭಾಗಿ
Nayab Saini


ಚಂಡೀಗಢ, 11 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹರಿಯಾಣದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ನಾಯಕ ನಯಾಬ್​​ ಸಿಂಗ್​ ಸೈನಿ ಅಕ್ಟೋಬರ್​ 15ರಂದು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಹಲವು ಸಚಿವರು, ರಾಜ್ಯ ಬಿಜೆಪಿಯ ಪ್ರಮುಖರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭೆ ಚುನಾವಣೆ ಗೆಲುವಿನ ಬಳಿಕ ಬುಧವಾರ ಸೈನಿ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಹಿರಿಯ ನಾಯಕರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದರು. ಬಿಜೆಪಿ ಕಳೆದ 10 ವರ್ಷದಿಂದ ಹರಿಯಾಣದಲ್ಲಿ ಆಡಳಿತ ನಡೆಸುತ್ತಿದೆ. ಪ್ರಸ್ತುತ ಚಿನಾವಣೆಯ ಗೆಲುವಿನ ಮೂಲಕ ಹ್ಯಾಟ್ರಿಕ್​ ಗೆಲುವು ದಾಖಲಿಸಿದೆ.

ರಾಜ್ಯದ ಒಟ್ಟು 90 ಕ್ಷೇತ್ರಗಳಲ್ಲಿ ಬಿಜೆಪಿ 48, ಕಾಂಗ್ರೆಸ್​ 37, ನ್ಯಾಷನಲ್​ ಲೋಕ ದಳ​ 2 ಸ್ಥಾನಗಳಲ್ಲಿ ಗೆದ್ದಿದೆ. ಮೂರು ಸ್ಥಾನಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಅವರು ಬೇಷರತ್ತಾಗಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ದುಷ್ಯಂತ್​ ಚೌಟಲರ ಜನನಾಯಕ್​ ಜನತಾ ಪಾರ್ಟಿ ಮತ್ತು ಕೇಜ್ರಿವಾಲ್ ನೇತೃತ್ವದ​ ಆಮ್​ ಆದ್ಮಿ ಪಕ್ಷ ಯಾವುದೇ ಸ್ಥಾನ ಗೆಲ್ಲಲಿಲ್ಲ.

ಪ್ರಮಾಣವಚನಕ್ಕೂ ಮುನ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ನೂತನ ಮುಖ್ಯಮಂತ್ರಿಯಾಗಿ ಸೈನಿ ಅವರನ್ನು ಆಯ್ಕೆ ಮಾಡಲಾಗುತ್ತದೆ. ಸೈನಿ ಜಾಟ್​ ಹೊರತಾದ ಹಿಂದುಳಿದ ವರ್ಗದ ನಾಯಕರು. ಲೋಕಸಭಾ ಚುನಾವಣೆಗೆ ಎರಡು ತಿಂಗಳು ಮೊದಲು ಬಿಜೆಪಿ, ಹಿರಿಯ ನಾಯಕ ಮನೋಹರ್​ ಲಾಲ್​ ಕಟ್ಟರ್​ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ಸೈನಿಯನ್ನು ನೇಮಿಸಿತ್ತು.

ಸೈನಿ ಲಾಡ್ವಾ ವಿಧಾನಸಭೆಯಿಂದ ಕಣಕ್ಕಿಳಿದಿದ್ದು, ಕಾಂಗ್ರೆಸ್​ ನಾಯಕ ಮೆವಾ ಸಿಂಗ್​ ಅವರ ವಿರುದ್ಧ 16,054 ಮತಗಳ ಅಂತರದಿಂದ ಗೆಲುವು ಕಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande