ತಿರುಮಲ, 01 ಅಕ್ಟೋಬರ್(ಹಿ.ಸ.) :
ಆ್ಯಂಕರ್ : ತಿರುಪತಿ ಲಡ್ಡುಗಳ ಕಲಬೆರಕೆ ಪ್ರಕರಣವು ಸರ್ವೋಚ್ಚ ನ್ಯಾಯಾಲಯದ ವ್ಯಾಪ್ತಿಯಲ್ಲಿರುವುದರಿಂದ ವಿಶೇಷ ತನಿಖಾ ತಂಡ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಆಂಧ್ರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ದ್ವಾರಕಾ ತಿರುಮಲ ರಾವ್ ತಿಳಿಸಿದ್ದಾರೆ.
ತಿರುಪತಿಯ ತಿರುಮಲದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ್ವಾರಕಾ ತಿರುಮಲ ರಾವ್ , ತನಿಖೆಯ ಭಾಗವಾಗಿ ವಿಶೇಷ ತನಿಖಾ ತಂಡ ಲಡ್ಡುವಿಗೆ ಬಳಸಲಾಗುವ ತುಪ್ಪ ಮತ್ತಿತರ ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿತ್ತು. ಲಡ್ಡುಗಳನ್ನು ಕಲಬೆರಕೆ ಮಾಡಲು ಹೇಗೆ ಸಾಧ್ಯ? ಎಂಬುದನ್ನು ವಿಚಾರಣೆ ನಡೆಸಿತ್ತು. ಈ ಎಲ್ಲ ವಿದ್ಯಮಾನಗಳ ಮಧ್ಯೆ ಸರ್ವೋಚ್ಚ ನ್ಯಾಯಾಲಯ ಪ್ರಕರಣದ ವಿಚಾರಣೆ ಆರಂಭಿಸಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ರಾಜ್ಯ ಸರ್ಕಾರದ ಪರವಾಗಿ ಹಾಜರಾದ ವಕೀಲರ ಸಲಹೆಯ ಮೇರೆಗೆ ವಿಶೇಷ ತನಿಖಾ ತಂಡ ನಡೆಸುತ್ತಿರುವ ತನಿಖೆಯನ್ನು ಅಮಾನತುಗೊಳಿಸುವ ನಿರ್ಧಾರವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಈ ಬಗ್ಗೆ ಹೆಚ್ಚು ಮಾಹಿತಿ ಹಂಚಿಕೊಳ್ಳುವುದು ಸೂಕ್ತವಲ್ಲ. ಅಕ್ಟೋಬರ್ 3ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ. ನಂತರದ ವಿದ್ಯಮಾನಗಳ ಆಧಾರದ ಮೇಲೆ ಎಸ್‌ಐಟಿ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್