ಕೋಲಾರ, 01 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ನಿವೃತ್ತ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ, ಜಿಲ್ಲಾ ನಿವೃತ್ತ ನೌಕರರ ವೇದಿಕೆಯ ಮುಖಂಡರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ನಿವೃತ್ತ ನೌಕರರ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿ, ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಯನ್ನು ರವಾನಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿವೃತ್ತ ನೌಕರ ವೇದಿಕೆ ಸಂಚಾಲಕ ಜಿ ಎಂ ಗೋಪಿ ಕೃಷ್ಣನ್ ಮಾತನಾಡಿ, ಕಳೆದ ೨೦೨೨ ರ ಜುಲೈ ೧ ರಿಂದ ೨೦೨೪ರ ಜುಲೈ ೩೧ರ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ಡಿ.ಸಿ.ಆರ್.ಜಿ,ಕಮ್ಯುಟೇಶನ್, ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಏಳನೇ ವೇತನ ಆಯೋಗದ ಲೆಕ್ಕಾಚಾರದಲ್ಲಿ ನೀಡಬೇಕೆಂದು ಹಾಗೂ ಪರಿಷ್ಕೃತ ಆದೇಶ ಹೊರಡಿಸ ಬೇಕೆಂದು ಆಗ್ರಹಿಸಿದರು.
ಏಳನೇ ವೇತನ ಆಯೋಗದ ಶಿಫಾರಸುಗಳನ್ನು ನಿವೃತ್ತ ನೌಕರರಿಗೆ ನೀಡದಿದ್ದರೆ ಡಿ ಗ್ರೂಪ್ ನೌಕರರಿಂದ ಹಿಡಿದು ಐ.ಎ.ಎಸ್ ಅಧಿಕಾರಿಗಳ ವರಗೆ ಲಕ್ಷಾಂತರ ರೂ ನಷ್ಟ ಉಂಟಾಗುತ್ತದೆ. ನಿವೃತ್ತ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ಈಗಾಗಲೇ ಫ್ರೀ ಡಮ್ ಪಾರ್ಕ್ ನಲ್ಲಿ ವಿಶ್ರಾಂತ ನ್ಯಾಯಮೂರ್ತಿ ಸಂತೋಷ ಹೆಗಡೆಯವರ ನೇತೃತ್ವದಲ್ಲಿ ನಮ್ಮ ವೇದಿಕೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಗಳ ಅಧ್ಯಕ್ಷರುಗಳ ಸಮ್ಮುಖದಲ್ಲಿ ರಾಜ್ಯ ಮಟ್ಟದ ಸಮಾವೇಶ ನಡೆಸಿ ಬೇಡಿಕೆಗಳ ಹಕ್ಕೊತ್ತಾಯದ ಮನವಿ ಸಲ್ಲಿಸಿದ್ದೇವೆ ಹಾಗೂ ಮೈಸೂರಿನಲ್ಲೂ ಮುಖ್ಯ ಮಂತ್ರಿಗಳಿಗೆ ವೇದಿಕೆಯ ನಿಯೋಗದಿಂದ ಮನವಿ ಸಲ್ಲಿಸಲಾಗಿದೆ.
ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದುದರಿಂದ ಸರ್ಕಾರದ ಗಮನ ಸೆಳೆಯಲು ಧರಣಿ ನಡೆಸಲಾಗುವುದೆಂದು ವಿವರಿಸಿದರು.
ಪ್ರತಿಭಟನೆಯ ಜಿಲ್ಲಾ ನಿವೃತ್ತ ನೌಕರರ ವೇದಿಕೆಯ ಗೌರವ ಅಧ್ಯಕ್ಷ ಪಲ್ಲವಿ ಮಣಿ, ಜಿಲ್ಲಾ ಸಂಚಾಲಕರಾದ ಕೆ.ಗೋಪಾಲ ರೆಡ್ಡಿ, ಜಿ.ಎನ್.ದೇವರೆಡ್ಡಿ, ಜಿಲ್ಲಾ ಮಹಿಳಾ ಸಂಚಾಲಕಿರಾದ ಶಾರದಮ್ಮ, ಮಂಜುಳಾ, ಎಲ್.ವೆಂಕಟರಮಣಪ್ಪ, ರಾಮಚಂದ್ರಪ್ಪ ಎನ್, ಬಂಗಾರಪೇಟೆ ತಾಲ್ಲೂಕು ಸಂಚಾಲಕರಾದ ನರಸಿಂಹನ್, ಮೋಹನ್ ಕುಮಾರ್, ಜನಾರ್ಧನ್, ನಾರಾಯಣಸ್ವಾಮಿ, ಮುನಿರತ್ನಂ, ಅಮರನಾಥ್ ಶೆಟ್ಟಿ, ಕೃಷ್ಣಪ್ಪ, ಅಂಜಿನಪ್ಪ, ಕೃಷ್ಣಪ್ಪ, ವೆಂಕಟೇಶಪ್ಪ, ಸೇರಿದಂತೆ ಎಲ್ಲಾ ತಾಲ್ಲೂಕು ಪದಾಧಿಕಾರಿಗಳು ವಹಿಸಿದ್ದು, ಪ್ರತಿಭಟನೆಯಲ್ಲಿ ಜಿಲ್ಲೆಯ ನೂರಾರು ನಿವೃತ್ತ ನೌಕರರು ಭಾಗವಹಿಸಿದ್ದರು.
ಚಿತ್ರ - ನಿವೃತ್ತ ಸರ್ಕಾರಿ ನೌಕರರು ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್