27 ಅಕ್ಟೋಬರ್ (ಹಿ.ಸ): ಆ್ಯಂಕರ್ :
ವಿನಾಕಾರಣ ಬೆಳಗಾವಿಯಲ್ಲಿ ಕನ್ನಡಿಗರನ್ನು ಕೆಣಕುತ್ತಾ ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಎಂಇಎಸ್ ಗೆ ತಕ್ಕ ಶಾಸ್ತಿ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಕುಂದಾ ನಗರಿಯ ಪ್ರತಿಷ್ಠೆಗೆ ಧಕ್ಕೆ ತಂದು ಅಲ್ಲಿನ ಸೌಹಾರ್ದ ವಾತಾವರಣವನ್ನು ಹಾಳು ಮಾಡುತ್ತಿರುವ ಎಂಇಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ ಹಲವು ಚುನಾವಣೆಗಳಲ್ಲಿ ರಾಜಕೀಯವಾಗಿ ಮುಖಭಂಗ ಅನುಭವಿಸಿರುವ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್)ಯು ಈಗ ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪುಂಡಾಟಿಕೆ ಶುರು ಮಾಡಿದೆ. ಕನ್ನಡ ಅಸ್ಮಿತೆಯನ್ನೇ ಕೆಣಕುವ, ಕನ್ನಡಿಗರನ್ನು ಅಪಮಾನಿಸುವ ಹೇಯ ಕೆಲಸಕ್ಕೆ ಮುಂದಾಗಿದೆ.
ಕೆಲ ದಿನಗಳಿಂದ ಬೆಳಗಾವಿಯಲ್ಲಿ ಕನ್ನಡಿಗರನ್ನು ಎಂಇಎಸ್ ವಿನಾಕಾರಣ ಕೆಣಕುತ್ತಿದೆ. ಪ್ರತಿಭಟನೆಯ ವೇಳೆ ಕರ್ನಾಟಕ ಸರಕಾರವನ್ನು ಎಂಇಎಸ್ ಪುಂಡರು ಗೇಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲಿನ ಸರಕಾರಿ ಕಚೇರಿಗಳಲ್ಲಿ ದಾಖಲೆಗಳನ್ನು ಮರಾಠಿ ಭಾಷೆಯಲ್ಲೇ ಕೊಡಬೇಕು ಎಂದು ಒತ್ತಾಯಿಸುವ ಭರದಲ್ಲಿ ಕರ್ನಾಟಕ ಸರಕಾರವನ್ನು ನಾಲಾಯಕ್ ಎಂದು ಕರೆದು ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ಖಂಡನೀಯ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್