
ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ದೆಹಲಿಯಲ್ಲಿ ಮಣಿಪುರದ ಖ್ಯಾತ ಸಂಗೀತಗಾರ ಚೋಂಗ್ಥಮ್ ವಿಕ್ರಮ್ ಸಿಂಗ್ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ ಬಳಿಕ ಮೃತಪಟ್ಟಿರುವ ಘಟನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಪಕ್ಷದ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಅಧ್ಯಕ್ಷ ಪವನ್ ಖೇರಾ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಘಟನೆಯ ಕುರಿತು ತ್ವರಿತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಮಂಗಳವಾರ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿ, ಚೋಂಗ್ಥಮ್ ವಿಕ್ರಮ್ ಸಿಂಗ್ ಅವರನ್ನು ಗುಂಪೊಂದು ಅಮಾನುಷವಾಗಿ ಹತ್ಯೆ ಮಾಡಿರುವುದು ಬಿಜೆಪಿ ಆಡಳಿತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸ್ಥಿತಿಗೆ ಸಂಬಂಧಿಸಿದ ಮತ್ತೊಂದು ಗಂಭೀರ ಘಟನೆ ಎಂದು ಆರೋಪಿಸಿದರು.
ವಿದ್ಯಾರ್ಥಿಗಳು ಸುರಕ್ಷಿತರಾಗಿಲ್ಲ, ಮಹಿಳೆಯರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ ಹಾಗೂ ಈಶಾನ್ಯ ರಾಜ್ಯಗಳ ಜನರ ವಿರುದ್ಧ ತಾರತಮ್ಯದ ಘಟನೆಗಳು ವರದಿಯಾಗುತ್ತಿವೆ ಎಂದು ಖರ್ಗೆ ಹೇಳಿದರು.
ದೆಹಲಿಯ ಅಪರಾಧ ಪರಿಸ್ಥಿತಿಗೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ನಿಗದಿಪಡಿಸಬೇಕು. ದುಃಖತಪ್ತ ಕುಟುಂಬಕ್ಕೆ ನ್ಯಾಯ ದೊರೆಯಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಾಹುಲ್ ಗಾಂಧಿ ಅವರು, ಚೋಂಗ್ಥಮ್ ವಿಕ್ರಮ್ ಸಿಂಗ್ ಅವರು ತಮ್ಮ ಮನೆಯ ಹೊರಗೆ ಕೆಲವರು ಮಾಡುತ್ತಿದ್ದ ಶಬ್ದವನ್ನು ಕಡಿಮೆ ಮಾಡುವಂತೆ ಕೇಳಲು ತೆರಳಿದ್ದರು. ಈ ವೇಳೆ ಅವರ ಮೇಲೆ ಹಲ್ಲೆ ನಡೆಸಿ, ಹೊಡೆದು ಕೊಲೆ ಮಾಡಲಾಗಿದೆ ಎಂದು ಹೇಳಿದರು.
ಈ ಘಟನೆ ದೆಹಲಿಯಲ್ಲಿ ವಾಸಿಸುತ್ತಿರುವ ಈಶಾನ್ಯ ರಾಜ್ಯಗಳ ಕುಟುಂಬಗಳ ಸುರಕ್ಷತೆ ಕುರಿತು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಪ್ರಕರಣದ ತ್ವರಿತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಕಾನೂನಿನ ಮುಂದೆ ತಂದು ಶಿಕ್ಷಿಸಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದರು.
ಪವನ್ ಖೇರಾ ತಮ್ಮ ಹೇಳಿಕೆಯಲ್ಲಿ, ಮೇಲ್ನೋಟಕ್ಕೆ ಈ ಘಟನೆ ಮದ್ಯದ ಅಮಲಿನಲ್ಲಿ ನಡೆದ ಪ್ರತ್ಯೇಕ ಹಿಂಸಾಚಾರದ ಪ್ರಕರಣದಂತೆ ಕಂಡುಬಂದರೂ, ಇದರ ಹಿಂದೆ ವ್ಯಾಪಕ ಸಾಮಾಜಿಕ ಹಾಗೂ ಆಡಳಿತಾತ್ಮಕ ವೈಫಲ್ಯವೂ ಗೋಚರಿಸುತ್ತಿದೆ ಎಂದು ಹೇಳಿದರು.
ವರ್ಷಗಳಿಂದ ನಿಯಮಗಳ ಉಲ್ಲಂಘನೆ, ಸಾರ್ವಜನಿಕ ಅವ್ಯವಸ್ಥೆ ಹಾಗೂ ಕಾನೂನಿನ ಅಸಮಾನ ಜಾರಿ ಸಾಮಾನ್ಯವಾಗಿರುವುದರಿಂದ ತಪ್ಪು ಮಾಡಿದವರು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಂಸ್ಕೃತಿ ಬೆಳೆದಿದೆ ಎಂದು ಅವರು ಆರೋಪಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R