ಗುಲ್ಜಾರ್ ಸಿಂಗ್ ಸಾವು ಪ್ರಕರಣ: ಪಂಜಾಬ್ ಸಿಎಂ ಭಗವಂತ್ ಮಾನ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಪಂಜಾಬ್ ಸಿಎಂ ಭಗವಂತ್ ಮಾನ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಗುಲ್ಜಾರ್ ಸಿಂಗ್ ಸಾವು ಪ್ರಕರಣ: ಪಂಜಾಬ್ ಸಿಎಂ ಭಗವಂತ್ ಮಾನ್ ರಾಜೀನಾಮೆಗೆ ಬಿಜೆಪಿ ಆಗ್ರಹ


ನವದೆಹಲಿ, 08 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಪಂಜಾಬ್ನ ಸಂಗ್ರೂರ್ ನಿವಾಸಿ ದಲಿತ ಸಮುದಾಯದ ಗುಲ್ಜಾರ್ ಸಿಂಗ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಆಡಳಿತಾರೂಢ ಆಮ್ ಆದ್ಮಿ ಪಕ್ಷದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಪ್ರಕರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಭಗವಂತ್ ಮಾನ್ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮಂಗಳವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಕ್ಷದ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ಪಂಜಾಬ್ನಲ್ಲಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಗಮನದಲ್ಲೇ ಮಾದಕ ವಸ್ತುಗಳ ದಂಧೆ ವ್ಯಾಪಕವಾಗಿ ನಡೆಯುತ್ತಿದ್ದರೂ ಅದನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು.

ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಅವರು ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಗುಲ್ಜಾರ್ ಸಿಂಗ್ ಅವರು ರಾಜ್ಯದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಹಾವಳಿ ಕುರಿತು ಪ್ರಶ್ನಿಸಿದ್ದರು. ತಮ್ಮ ಪುತ್ರ ಚಿಟ್ಟಾ (ಮಾದಕ ವಸ್ತು) ವ್ಯಸನಕ್ಕೆ ಒಳಗಾಗಿದ್ದು, ಆತನ ಚಿಕಿತ್ಸೆಗೆ ಮನೆಯ ಬೆಲೆಬಾಳುವ ವಸ್ತುಗಳನ್ನೂ ಮಾರಾಟ ಮಾಡಬೇಕಾಯಿತು ಎಂದು ಸಚಿವರ ಬಳಿ ಅಳಲು ತೋಡಿಕೊಂಡಿದ್ದರು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಭಾಟಿಯಾ ಆರೋಪಿಸಿದರು.

ಸಚಿವರನ್ನು ಪ್ರಶ್ನಿಸಿದ ಬಳಿಕ ಗುಲ್ಜಾರ್ ಸಿಂಗ್ ಅವರ ಮೇಲೆ ಕ್ಷಮೆ ಕೇಳುವಂತೆ ಒತ್ತಡ ಹೇರಲಾಗಿತ್ತು ಹಾಗೂ ಅವರನ್ನು ಕಿರುಕುಳಕ್ಕೆ ಒಳಪಡಿಸಲಾಗಿತ್ತು ಎಂದು ಬಿಜೆಪಿ ಆರೋಪಿಸಿದೆ. ಇದಾದ ಬಳಿಕ ಅವರು ವಿಷ ಸೇವಿಸಿದ್ದರು ಎನ್ನಲಾಗಿದೆ. ಸಾವಿಗೂ ಮುನ್ನ ಗುಲ್ಜಾರ್ ಸಿಂಗ್ ದಾಖಲಿಸಿದ್ದ ವಿಡಿಯೋದಲ್ಲಿ ತಮ್ಮ ಸಾವಿಗೆ ಹರ್ಪಾಲ್ ಸಿಂಗ್ ಚೀಮಾ ಹಾಗೂ ಗ್ರಾಮದ ಸರಪಂಚ್ ಕಾರಣ ಎಂದು ಆರೋಪಿಸಿದ್ದರು ಎಂದು ಭಾಟಿಯಾ ತಿಳಿಸಿದ್ದಾರೆ.

ಮರಣಕ್ಕೂ ಮುನ್ನ ನೀಡುವ ಹೇಳಿಕೆಯನ್ನು (ಡೈಯಿಂಗ್ ಡಿಕ್ಲರೇಷನ್) ಕಾನೂನಿನಲ್ಲಿ ಪ್ರಮುಖ ಸಾಕ್ಷ್ಯವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಪ್ರಕರಣದ ನಿಷ್ಪಕ್ಷಪಾತ ತನಿಖೆ ಖಚಿತಪಡಿಸಲು ಹರ್ಪಾಲ್ ಸಿಂಗ್ ಚೀಮಾ ಅವರು ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಒತ್ತಾಯಿಸಿದೆ.ಗುಲ್ಜಾರ್ ಸಿಂಗ್ ಅವರು ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ,ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಭಾಟಿಯಾ ಪ್ರಶ್ನಿಸಿದರು.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆಯೇ? ಸಚಿವರನ್ನು ಇದುವರೆಗೆ ಏಕೆ ಸಚಿವ ಸ್ಥಾನದಿಂದ ವಜಾಗೊಳಿಸಿಲ್ಲ? ಎಂಬ ಪ್ರಶ್ನೆಗಳನ್ನೂ ಅವರು ಸರ್ಕಾರದ ಮುಂದಿಟ್ಟಿದ್ದು,ಪ್ರಕರಣದ ಕುರಿತು ನಿಷ್ಪಕ್ಷಪಾತ ಮತ್ತು ಸ್ವತಂತ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande