
ಬೆಂಗಳೂರು, 05ಸೆಪ್ಟೆಂಬರ್(ಹಿ.ಸ.)
ಆ್ಯಂಕರ್:
ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಆಡುವ ಪ್ರತಿಭೆಗಳನ್ನು ಗುರುತಿಸಿ ಜಗತ್ತಿಗೆ ಪರಿಚಯಿಸುವ ಸದುದ್ದೇಶದಿಂದ ಹಮ್ಮಿಕೊಳ್ಳಲಾಗಿರುವ 'ಕರ್ನಾಟಕ ಸಾಫ್ಟ್ ಬಾಲ್ ಪ್ರಿಮಿಯರ್ ಲೀಗ್' (ಕೆಎಸ್ಪಿಎಲ್) ಸೀಸನ್-3 ನಗರದ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಅತ್ಯಂತ ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಚಂದನವನದ ಖ್ಯಾತ ತಾರೆಯರು ಹಾಗೂ ಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖ್ಯಾತ ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ, ಟೆನಿಸ್ ಬಾಲ್ ಕ್ರಿಕೆಟ್ ಆಡುವವರು ಎಲ್ಲೆಲ್ಲೂ ಸಿಗುತ್ತಾರೆ. ಆದರೆ ಸಾಫ್ಟ್ ಬಾಲ್ ಕ್ರಿಕೆಟ್ ಕೇವಲ ಸಾಫ್ಟ್ ಆಗಿರುತ್ತದೆ ಅಂದುಕೊಂಡಿದ್ದೆ, ಆಡಿದ ಮೇಲೆಯೇ ಗೊತ್ತಾಯಿತು ಇದು ಹಾರ್ಡ್ ಬಾಲ್ ಕ್ರಿಕೆಟ್ ಗಿಂತ ಕಡಿಮೆ ಇಲ್ಲ ಎಂದು. ಲೇದರ್ ಬಾಲ್ ಆಟಕ್ಕೂ ಸಾಫ್ಟ್ ಬಾಲ್ ಆಟಕ್ಕೂ ಬಹಳ ವ್ಯತ್ಯಾಸವಿದೆ, ಎಂದರು. ಅಲ್ಲದೆ, ಇಂತಹ ನೂರಾರು ಸೀಸನ್ ಗಳು ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿ, ಟೂರ್ನಿ ಯಶಸ್ಸಿಗೆ ಶ್ರಮಿಸುತ್ತಿರುವ ತಂಡದ ಮಾಲೀಕರು ಹಾಗೂ ಪ್ರಾಯೋಜಕರಿಗೆ ವಿಶೇಷ ಧನ್ಯವಾದ ತಿಳಿಸಿದರು.
ಖ್ಯಾತ ನಟಿ ಐಂದ್ರೀತಾ ರೈ ಮಾತನಾಡಿ, ಈ ಸೀಸನ್ನ ವಿಶೇಷತೆಯೆಂದರೆ ಹಳ್ಳಿಯಿಂದ ಬಂದಿರುವ ಪ್ರತಿಭಾನ್ವಿತ ಕ್ರೀಡಾಪಟುಗಳಿಗೆ ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಹಳ್ಳಿಯ ಮೂಲದ ಪ್ರತಿಭೆಗಳಿಗೆ ಸೂಕ್ತ ಅವಕಾಶ ಸಿಗಬೇಕು, ಎಂದು ಅಭಿಪ್ರಾಯಪಟ್ಟರು.
ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶಕೆಎಸ್ಪಿಎಲ್ ಕ್ರಿಕೆಟ್ ಫೌಂಡೇಶನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು ಮಾತನಾಡಿ, ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವುದು ಈ ಸೀಸನ್ನ ಮುಖ್ಯ ಉದ್ದೇಶವಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಕ್ರೀಡಾಪಟುಗಳನ್ನು ಆಯ್ಕೆ ಮಾಡಿರುವಂತೆ, ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲೂ 'ಐಎಸ್ಪಿಎಲ್' ಪಂದ್ಯಾವಳಿ ಆಯೋಜಿಸುವ ಇಚ್ಛೆ ಇದೆ. ಗ್ರಾಮೀಣ ಕ್ರೀಡಾಪಟುಗಳು ನಮ್ಮ ಆಸ್ತಿಯಾಗಿದ್ದು, ಅವರು ಅಂತರರಾಷ್ಟ್ರೀಯ ಮಟ್ಟದಲ್ಲೂ ಬೆಳೆಯಬೇಕೆಂಬುದು ನಮ್ಮ ಸಂಸ್ಥೆಯ ಮೂಲ ಗುರಿಯಾಗಿದೆ ಎಂದು ವಿವರಿಸಿದರು.
ಈ ಬಾರಿಯ ಸೀಸನ್-3 ಟೂರ್ನಿಯಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿದಿದ್ದು, ಒಟ್ಟು 63 ರೋಚಕ ಪಂದ್ಯಗಳು ನಡೆಯಲಿವೆ.ಉದ್ಘಾಟನಾ ಸಮಾರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಕೆಎಸ್ಪಿಎಲ್ ಅಧ್ಯಕ್ಷ ಸಿದ್ದರಾಮ ದೇಸಾಯಿ, ಫೌಂಡೇಷನ್ ಮುಖ್ಯಸ್ಥ ಡಾ. ಗಂಗಾಧರ್ ರಾಜು, ಖ್ಯಾತ ನಿರ್ದೇಶಕ ಎಸ್. ನಾರಾಯಣ್, ನಟರಾದ ರವಿಚೇತನ್ ಸೇರಿದಂತೆ ಚಂದನವನದ ಹಲವು ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R