
ಕಲಬುರಗಿ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಜಿಲ್ಲೆಯಲ್ಲಿ ಕಂಕರ್ ಮಷಿನ್ಗಳಿಂದ ನಿಯಮ ಮೀರಿ ಓವರ್ಲೋಡ್ ತುಂಬಿಕೊಂಡು ಸಂಚರಿಸುತ್ತಿರುವ ಟಿಪ್ಪರ್ಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು,
ಸಾರ್ವಜನಿಕರ ಜೀವಕ್ಕೆ ಕುತ್ತು ತಂದಿದೆ. ಕಾಳಗಿ ತಾಲ್ಲೂಕಿನ ಮತ್ತಿಮೂಡ್ ಮತ್ತು ಇಂಗನಕಲ್ಲ ಗ್ರಾಮಗಳ ಮೂಲಕ ಚಿಂಚೋಳಿ ತಾಲ್ಲೂಕು ಮಾರ್ಗವಾಗಿ ಸಂಚರಿಸುವ ಓವರ್ಲೋಡ್ ಟಿಪ್ಪರ್ಗಳ ಅತಿವೇಗ ಹಾಗೂ ರಸ್ತೆ ಮೇಲೆ ಬೀಳುತ್ತಿರುವ ಜೆಲ್ಲಿ ಕಲ್ಲುಗಳಿಂದ ರೋಸಿಹೋದ ಗ್ರಾಮಸ್ಥರು ಮತ್ತು ದಲಿತ ಪರ ಸಂಘಟನೆಗಳ ಕಾರ್ಯಕರ್ತರು ಏಕಾಏಕಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟಿಪ್ಪರ್ಗಳು ಲೈಮ್ಸ್ಟೋನ್ ಹಾಗೂ ಜೆಲ್ಲಿ ಕಲ್ಲುಗಳನ್ನು ಮಿತಿಮೀರಿ ತುಂಬಿಕೊಂಡು ಯಾವುದೇ ಟಾರ್ಪಲ್ ಮುಚ್ಚದೆ ಅತಿವೇಗವಾಗಿ ಧಾವಿಸುತ್ತಿರುವುದರಿಂದ, ಚಲಿಸುವಾಗ ರಸ್ತೆ ಮೇಲೆ ಜೆಲ್ಲಿ ಕಲ್ಲುಗಳು ಉದುರಿ ಬೀಳುತ್ತಿವೆ. ಇದರಿಂದ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ನಿತ್ಯ ಪ್ರಾಣಭಯದಲ್ಲೇ ಓಡಾಡುವಂತಾಗಿದೆ. ಅಲ್ಲದೆ, ಹಾರುವ ಧೂಳಿನಿಂದಾಗಿ ಸ್ಥಳೀಯರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ.
ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿರುವ ಈ ಟಿಪ್ಪರ್ಗಳ ಅತಿವೇಗ ಹಾಗೂ ಓವರ್ಲೋಡ್ಗೆ ಕಡಿವಾಣ ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಸ್ಥಳಕ್ಕೆ ಬಂದ ಹಿರಿಯ ಅಧಿಕಾರಿಗಳು ಟಿಪ್ಪರ್ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ವೇಗ ಮತ್ತು ಭಾರ ಮಿತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದರು. ಅಧಿಕಾರಿಗಳು ಬರುವವರೆಗೆ ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವರೆಗೆ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R