
ಕಲಬುರಗಿ, 05 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ರಾಜ್ಯದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ ಹಾಗೂ ಕೆಪಿಎಸ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಹಲವು ಪ್ರಮುಖ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಾರಾಗೃಹಗಳಲ್ಲಿ ಕೈದಿಗಳ ದುಶ್ಚಟಗಳ ನಿಯಂತ್ರಣ ಹಾಗೂ ನೂತನ ಜೈಲುಗಳ ನಿರ್ಮಾಣದ ಕುರಿತು ಮಾತನಾಡಿದ ಅವರು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೆಲ ಕೈದಿಗಳು ಹೆಚ್ಚು ದುಶ್ಚಟವುಳ್ಳವರಾಗಿರುತ್ತಾರೆ. ಜೈಲಿನಲ್ಲಿ ಅವರಿಗೆ ಗುಟ್ಕಾ, ತಂಬಾಕು ಹಾಗೂ ಗಾಂಜಾ ಸಿಗದಿದ್ದಾಗ ಈ ರೀತಿ ವರ್ತನೆ ತೋರುತ್ತಾರೆ. ಇದಕ್ಕಾಗಿ ಕಾಲಕಾಲಕ್ಕೆ ಅಂತಹ ಕೈದಿಗಳಿಗೆ ಕೌನ್ಸಿಲಿಂಗ್ ನಡೆಸಲಾಗುತ್ತಿದ್ದು, ಹಿತೇಂದ್ರ ವರದಿ ಅನುಸಾರ ಕೈದಿಗಳ ಮಾನಸಿಕ ಸ್ಥಿತಿಗತಿ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಜೈಲಿನ ಗೋಡೆ ಎತ್ತರ ಮಾಡುವುದು ಹಾಗೂ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಆದರೆ ಯಾವ ಕಾರಣಕ್ಕೆ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದರು.
ಜೈಲಿನಲ್ಲಿ ಕೈದಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಾಲ್ಕೈದು ಹೊಸ ಕಾರಾಗೃಹಗಳು ನಿರ್ಮಾಣ ಹಂತದಲ್ಲಿವೆ ಎಂದು ತಿಳಿಸಿದ ಅವರು, ಹೊಸ ಕಾರಾಗೃಹಗಳಿಗೆ ಕೈದಿಗಳನ್ನು ಸ್ಥಳಾಂತರ ಮಾಡಿದಾಗ ಇಂತಹ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬೆಂಗಳೂರಿನಲ್ಲಿ 'ಮನ್ ಕೀ ಬಾತ್' ನಲ್ಲಿ ಪ್ರಸ್ತಾವಿತ ಮಹಿಳೆಯ ಇಡ್ಲಿ ಬಂಡಿ ಸ್ಥಳಾಂತರ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮೋದಿ ಅವರು ಮನ್ ಕೀ ಬಾತ್ ನಲ್ಲಿ ಮಾತನಾಡಿದ ತಕ್ಷಣ ಕಾನೂನನ್ನು ಬದಲಾಯಿಸಲು ಬರುವುದಿಲ್ಲ.ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳಿಂದ ಗೂಡಂಗಡಿ ಹಾಗೂ ಬೀದಿಬದಿ ವ್ಯಾಪಾರಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳಾಂತರ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಕೆಪಿಎಸ್ಸಿ ಹಗರಣದಲ್ಲಿ ಪ್ರಿಯಾಂಕ್ ಖರ್ಗೆ ಜೈಲಿಗೆ ಹೋಗಲಿದ್ದಾರೆ ಎಂಬ ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಪ್ರಿಯಾಂಕ್ ಖರ್ಗೆ, ಮೊದಲು ರಾಮುಲು ಅವರಿಗೆ ಕೆಪಿಎಸ್ಸಿ ಫುಲ್ಫಾರ್ಮ್ ಏನು ಅಂತ ಹೇಳಲು ಹೇಳಿ ಎಂದು ಸವಾಲು ಹಾಕಿದರು. ನಾನು ಒಂದೇ ಕ್ಷೇತ್ರದಲ್ಲಿ ನಾಲ್ಕು ಸಲ ಹಾಗೂ ಮಲ್ಲಿಕಾರ್ಜುನ ಖರ್ಗೆಯವರು ಒಂದೇ ಕ್ಷೇತ್ರದಲ್ಲಿ ಒಂಭತ್ತು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ. ಆದರೆ ರಾಮುಲು ಅವರು ಜನರಿಂದ ತಿರಸ್ಕಾರಕ್ಕೆ ಒಳಗಾಗಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಮುಲುಗೆ ಮೊದಲು ಸರಿಯಾಗಿ ಕನ್ನಡ ಮಾತನಾಡಲು ಹೇಳಿ ಎಂದು ವಾಗ್ದಾಳಿ ನಡೆಸಿದರು.
ನಾನು ಗೃಹ ಮಂತ್ರಿಯಾಗಿರುವವರೆಗೆ ಕೆಪಿಎಸ್ಸಿ ಹಗರಣದ ತನಿಖೆ ಯಾವುದೇ ಕಾರಣಕ್ಕೂ ಡೈವರ್ಟ್ ಆಗಲು ಬಿಡುವುದಿಲ್ಲ. ಈ ಪ್ರಕರಣದಲ್ಲಿ ಬಲವಾದ ಸಾಕ್ಷ್ಯಗಳಿವೆ. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡಲು ಬಿಡುವುದಿಲ್ಲ. ಫಾಸ್ಟ್ಟ್ರ್ಯಾಕ್ ಕೋರ್ಟ್ ಸ್ಥಾಪನೆ ಬಗ್ಗೆಯೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಎಚ್.ಡಿ. ಕುಮಾರಸ್ವಾಮಿ ಅವರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ, ಕುಮಾರಸ್ವಾಮಿ ಅವರ ಹತ್ತು ಪ್ರಶ್ನೆಗೆ ನನ್ನದು ಒಂದೇ ಪ್ರಶ್ನೆ; ಕೆಪಿಎಸ್ಸಿ ಹುದ್ದೆ ರದ್ದು ಮಾಡುವ ಅಧಿಕಾರ ಯಾರಿಗಿದೆ ಎನ್ನುವುದನ್ನು ಅವರು ಹೇಳಲಿ? ನಮ್ಮ ಕೈಯಲ್ಲಿ ಆ ಅಧಿಕಾರ ಇರುವುದಿಲ್ಲ. ಕೆಪಿಎಸ್ಸಿಯಲ್ಲಿ ಈ ಹಿಂದೆ ಅಕ್ರಮ ಎಸಗಿದ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದೇವೆ. ಕಳೆದ ಹಲವು ವರ್ಷಗಳಿಂದ ಈ ಅಕ್ರಮಗಳು ನಡೆಯುತ್ತಿದ್ದು, ನಾವು ಈ ಬಾರಿ ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದರು.
ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಚಿವರು, ಬರ ಪರಿಹಾರ ಹಾಗೂ ಸಾಲ ಮನ್ನಾ ವಿಚಾರವಾಗಿ ವಾಗ್ದಾಳಿ ನಡೆಸಿದರು. ಬರ ಘೋಷಣೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಮಾನದಂಡದ ಪ್ರಕಾರ. ಅದನ್ನು ಬಿಟ್ಟು ಕಲಬುರಗಿಯಲ್ಲಿ ಬಿಜೆಪಿಯವರು ಪ್ರತಿಭಟನೆ ಹೆಸರಲ್ಲಿ ಗುಂಡಾಗಿರಿ ಮಾಡುತ್ತಾರೆ. ತಾಕತ್ತಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ. ಒಬ್ಬ ಉದ್ಯಮಿಯ 22 ಸಾವಿರ ಕೋಟಿ ರೂ. ಸಾಲವನ್ನು 6 ಕೋಟಿಗೆ ಸೆಟ್ಲ್ಮೆಂಟ್ ಮಾಡುತ್ತೀರಿ, ಆದರೆ ರೈತರಿಗೆ ಪರಿಹಾರ ಕೊಡಲು ಮಾತ್ರ ಹಿಂದೇಟು ಹಾಕುತ್ತೀರಿ ಎಂದು ಕೇಂದ್ರ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R