ಸಿಎಂ ಮೊದಲ ಭೇಟಿಯಲ್ಲಿ ಅಸಮಾಧಾನದ ಅದ್ಧೂರಿ ಸ್ವಾಗತ
ಬಾಗಲಕೋಟೆ, 05 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ವಿಧಾನಸಭೆ ಉಪಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ಆಂತರಿಕ ಅಸಮಾಧಾನ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಬಹಿರಂಗಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವ
ಅಸಮಾಧಾನ


ಬಾಗಲಕೋಟೆ, 05 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ವಿಧಾನಸಭೆ ಉಪಚುನಾವಣೆ ಮುಕ್ತಾಯಗೊಂಡ ಬೆನ್ನಲ್ಲೇ ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ಆಂತರಿಕ ಅಸಮಾಧಾನ ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲೇ ಬಹಿರಂಗಗೊಂಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಬರ ಪರಿಸ್ಥಿತಿ ಅಧ್ಯಯನಕ್ಕಾಗಿ ಶುಕ್ರವಾರ ಬಾಗಲಕೋಟೆ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬರಮಾಡಿಕೊಳ್ಳಲು ನಗರದ ಹೊರವಲಯದ ಶಿರೂರು ಅಗಸಿ ಬಳಿ ಅಪಾರ ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರು ಸೇರಿದ್ದರು. ಈ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು “ಬಿಟಿಡಿಎ ಅಧ್ಯಕ್ಷ ತಪಶೆಟ್ಟಿ ಹಟಾವೋ” ಎಂಬ ಫಲಕಗಳನ್ನು ಪ್ರದರ್ಶಿಸಿರುವುದು ಗಮನ ಸೆಳೆಯಿತು.

ಮುಖ್ಯಮಂತ್ರಿಗಳ ಮೊದಲ ಭೇಟಿಯ ಸಂದರ್ಭದಲ್ಲೇ ಪಕ್ಷದ ಕಾರ್ಯಕರ್ತರಿಂದಲೇ ಇಂತಹ ಅಸಮಾಧಾನ ವ್ಯಕ್ತವಾಗಿರುವುದು ಜಿಲ್ಲಾ ಕಾಂಗ್ರೆಸ್ನ ಆಂತರಿಕ ಬೆಳವಣಿಗೆಗಳ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದುವರೆಗೂ ಪಕ್ಷದೊಳಗೆ ಮಡುಗಟ್ಟಿದ್ದ ಅಸಮಾಧಾನ ಇದೀಗ ಬಹಿರಂಗ ಸ್ವರೂಪ ಪಡೆದುಕೊಂಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ ಎಂದು ಪತ್ರಕರ್ತರ ಸಂಗಮೇಶ ಕುಂಬಾರ ವ್ಯಾಖ್ಯಾನಿಸಿದ್ದಾರೆ.

ಅಸಮಾಧಾನಕ್ಕೆ ಗುಂಪುಗಾರಿಕೆಯ ಬಣ್ಣ

ಬಾಗಲಕೋಟೆ ವಿಧಾನಸಭೆ ಉಪಚುನಾವಣೆ ಮುಗಿದ ನಂತರ ಕಾಂಗ್ರೆಸ್ ಪಾಳೆಯದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಶಾಸಕ ಉಮೇಶ ಮೇಟಿ ಅವರನ್ನು ಬೆಂಬಲಿಸುವ ಒಂದು ಬಣ ಹಾಗೂ ಅವರ ವಿರುದ್ಧ ನಿಲುವು ಹೊಂದಿರುವ ಮತ್ತೊಂದು ಬಣದ ನಡುವೆ ರಾಜಕೀಯ ಮೇಲಾಟ ನಡೆದಿದೆ ಎನ್ನಲಾಗುತ್ತಿದೆ.

ಈ ಗುಂಪುಗಾರಿಕೆಯ ಪರಿಣಾಮ ಬಾಗಲಕೋಟೆ ಪಟ್ಟಣದ ಅಭಿವೃದ್ಧಿ ವಿಚಾರಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ವಿಶೇಷವಾಗಿ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಬಿಟಿಡಿಎ) ವಿಚಾರದಲ್ಲಿ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳು ತೀವ್ರಗೊಂಡಿವೆ ಎನ್ನಲಾಗುತ್ತಿದೆ.ಅಚ್ಚರಿಯ ಸಂಗತಿಯೆಂದರೆ, ಆಡಳಿತ ಮಂಡಳಿಯಲ್ಲಿನ ಭಿನ್ನಾಭಿಪ್ರಾಯಗಳ ಕಾರಣದಿಂದಾಗಿ ಬಿಟಿಡಿಎ ಆಡಳಿತ ಮಂಡಳಿ ಸಭೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಚರ್ಚೆಯೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಸಂಕಷ್ಟಕ್ಕೆ ಸಿಲುಕಿದ ಮುಳುಗಡೆ ಸಂತ್ರಸ್ತರು?

ಬಿಟಿಡಿಎ ವ್ಯಾಪ್ತಿಯ ಹಲವು ಅಭಿವೃದ್ಧಿ ಹಾಗೂ ಪುನರ್ವಸತಿ ವಿಚಾರಗಳು ಜನಜೀವನಕ್ಕೆ ನೇರವಾಗಿ ಸಂಬಂಧಿಸಿವೆ. ಆದರೆ ಆಡಳಿತಾರೂಢ ಪಕ್ಷದೊಳಗಿನ ಆಂತರಿಕ ಭಿನ್ನಾಭಿಪ್ರಾಯಗಳು ಆಡಳಿತಾತ್ಮಕ ನಿರ್ಧಾರಗಳ ಮೇಲೂ ಪರಿಣಾಮ ಬೀರುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಒಬ್ಬರ ನಿರ್ಧಾರಕ್ಕೆ ಮತ್ತೊಬ್ಬರು ವಿರೋಧ ವ್ಯಕ್ತಪಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ಇದರಿಂದ ಅಧಿಕಾರಿಗಳೂ ಮುಕ್ತವಾಗಿ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿ ಎದುರಾಗಿದೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಮುಖಂಡರ ನಡುವಿನ ಭಿನ್ನಾಭಿಪ್ರಾಯದ ಪರಿಣಾಮ ಸಾಮಾನ್ಯ ಜನರು, ಅದರಲ್ಲೂ ಮುಳುಗಡೆ ಸಂತ್ರಸ್ತರು ಸಂಕಷ್ಟ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಾರದು ಎಂಬ ಆತಂಕವೂ ವ್ಯಕ್ತವಾಗಿದೆ. “ಗಂಡ-ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು” ಎಂಬ ಪರಿಸ್ಥಿತಿ ನಿರ್ಮಾಣವಾಗದಂತೆ ಪಕ್ಷದ ಹಿರಿಯ ನಾಯಕತ್ವ ಮಧ್ಯಪ್ರವೇಶಿಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

ಶಾಸಕರ ಬೆಂಬಲಿಗರ ನಡೆಗೆ ಚರ್ಚೆ

ಕ್ಷೇತ್ರದ ಶಾಸಕರಾದ ಉಮೇಶ ಮೇಟಿ ಅವರು ಪಕ್ಷದೊಳಗಿನ ಎಲ್ಲ ಬಣಗಳನ್ನು ಒಗ್ಗೂಡಿಸಿ ಮುನ್ನಡೆಸಬೇಕಾದ ಹೊಣೆಗಾರಿಕೆ ಹೊಂದಿದ್ದಾರೆ. ಆದರೆ ಬಿಟಿಡಿಎ ವಿಚಾರದಲ್ಲಿ ಅವರ ಬೆಂಬಲಿಗರು ಸಕ್ರಿಯವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂಬ ದೂರುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಶಾಸಕರು ಈ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಯಾವುದೇ ನಿಲುವು ವ್ಯಕ್ತಪಡಿಸದಿದ್ದರೂ, ಅವರ ಬೆಂಬಲಿಗರ ನಡೆಗೆ ಸಂಬಂಧಿಸಿದಂತೆ ಹಲವು ರೀತಿಯ ರಾಜಕೀಯ ವ್ಯಾಖ್ಯಾನಗಳು ಆರಂಭವಾಗಿವೆ.

ಮುಖ್ಯಮಂತ್ರಿಗಳ ಎದುರೇ ಅಸಮಾಧಾನ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ, ಈ ಬೆಳವಣಿಗೆ ಕೇವಲ ಸ್ಥಳೀಯ ಮಟ್ಟದ ಅಸಮಾಧಾನವಾಗಿದೆಯೇ ಅಥವಾ ಮುಂದಿನ ದಿನಗಳಲ್ಲಿ ಬಂಡಾಯದ ಸ್ವರೂಪ ಪಡೆಯಲಿದೆಯೇ ಎಂಬ ಪ್ರಶ್ನೆಯೂ ಇದೀಗ ಎದುರಾಗಿದೆ.

ಬಿಟಿಡಿಎ ಅಧ್ಯಕ್ಷ ಸ್ಥಾನದ ಮೇಲಾಟ?

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ವಿಚಾರವೂ ಈ ಬೆಳವಣಿಗೆಯ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎನ್ನಲಾಗುತ್ತಿದೆ.ಬಿಟಿಡಿಎ ಅಧ್ಯಕ್ಷ ಸ್ಥಾನಕ್ಕೆ ಶಾಸಕ ಉಮೇಶ ಮೇಟಿ ಅವರನ್ನು ನೇಮಕ ಮಾಡಬೇಕು ಎಂಬ ಬೇಡಿಕೆಯನ್ನು ಅವರ ಬೆಂಬಲಿಗರು ಮುಂದಿಟ್ಟುಕೊಂಡಿದ್ದಾರೆಯೇ ಎಂಬ ಚರ್ಚೆ ಇದೀಗ ಜೋರಾಗಿದೆ. ಇದೇ ಹಿನ್ನೆಲೆಯಲ್ಲೇ ಪ್ರಸ್ತುತ ಅಧ್ಯಕ್ಷರ ವಿರುದ್ಧ ಅಸಮಾಧಾನವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವ ಪ್ರಯತ್ನ ನಡೆದಿದೆ ಎಂಬ ರಾಜಕೀಯ ವ್ಯಾಖ್ಯಾನವೂ ಕೇಳಿಬರುತ್ತಿದೆ.

ಆದರೆ ಈ ಬೆಳವಣಿಗೆಯ ಹಿಂದಿನ ನಿಖರ ಉದ್ದೇಶವೇನು ಎಂಬುದು ಸ್ಪಷ್ಟವಾಗಿಲ್ಲ. ಈ ಕುರಿತು ಸಂಬಂಧಪಟ್ಟ ಕಾಂಗ್ರೆಸ್ ಮುಖಂಡರಿಂದ ಅಧಿಕೃತ ಸ್ಪಷ್ಟನೆ ಹೊರಬಂದಿಲ್ಲ.

ಸಿಎಂಗೆ ಮುಜುಗರ ತಂದ ಪ್ರಸಂಗ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಬಾಗಲಕೋಟೆಗೆ ಮೊದಲ ಬಾರಿಗೆ ಆಗಮಿಸಿದ್ದ ಸಂದರ್ಭದಲ್ಲೇ ಪಕ್ಷದ ಕಾರ್ಯಕರ್ತರಿಂದ ಅಸಮಾಧಾನದ ಫಲಕಗಳು ಪ್ರದರ್ಶನಗೊಂಡಿರುವುದು ಕಾಂಗ್ರೆಸ್ ಪಾಳೆಯಕ್ಕೆ ಮುಜುಗರದ ಸಂಗತಿಯಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ಅದರಲ್ಲೂ ಬರ ಅಧ್ಯಯನದಂತಹ ಮಹತ್ವದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಜಿಲ್ಲೆಗೆ ಆಗಮಿಸಿದ್ದ ಸಂದರ್ಭದಲ್ಲಿ ಪಕ್ಷದ ಆಂತರಿಕ ಸಮಸ್ಯೆಗಳು ಬಹಿರಂಗವಾಗಿ ಕಾಣಿಸಿಕೊಂಡಿರುವುದು ಪಕ್ಷದ ಹಿರಿಯ ನಾಯಕರ ಗಮನ ಸೆಳೆದಿದೆ ಎನ್ನಲಾಗುತ್ತಿದೆ.

ಪಕ್ಷದೊಳಗಿನ ಅಸಮಾಧಾನವನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಬಗೆಹರಿಸಬೇಕಾಗಿತ್ತು. ಆದರೆ ಮುಖ್ಯಮಂತ್ರಿಗಳ ಸ್ವಾಗತದ ಸಂದರ್ಭದಲ್ಲೇ ಪ್ರತಿಭಟನಾ ಧಾಟಿಯ ಫಲಕಗಳು ಕಾಣಿಸಿಕೊಂಡಿರುವುದು ಜಿಲ್ಲಾ ಕಾಂಗ್ರೆಸ್ನ ಸಂಘಟನಾ ಸ್ಥಿತಿಗತಿಯ ಕುರಿತು ಚರ್ಚೆಗೆ ಕಾರಣವಾಗಿದೆ.

ಡಿಕೆಶಿ ಮುಂದಿನ ನಡೆ ಏನು?

ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಈ ಬೆಳವಣಿಗೆ ಕುರಿತು ಡಿ.ಕೆ. ಶಿವಕುಮಾರ್ ಅವರು ಸದ್ಯ ಯಾವುದೇ ಬಹಿರಂಗ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಕ್ಷದ ಕಾರ್ಯಕರ್ತರ ಅಸಮಾಧಾನವನ್ನು ಅವರು ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಬಾಗಲಕೋಟೆ ಕಾಂಗ್ರೆಸ್ನಲ್ಲಿನ ಆಂತರಿಕ ಭಿನ್ನಾಭಿಪ್ರಾಯಕ್ಕೆ ಶೀಘ್ರ ಪರಿಹಾರ ಕಂಡುಕೊಳ್ಳಲಾಗುತ್ತದೆಯೇ? ಬಿಟಿಡಿಎ ವಿಚಾರದಲ್ಲಿ ಮುಖ್ಯಮಂತ್ರಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ? ಪಕ್ಷದೊಳಗಿನ ಎರಡೂ ಬಣಗಳನ್ನು ಒಗ್ಗೂಡಿಸಲು ರಾಜ್ಯ ನಾಯಕತ್ವ ಯಾವ ಕ್ರಮ ಕೈಗೊಳ್ಳಲಿದೆ? ಎಂಬ ಪ್ರಶ್ನೆಗಳು ಇದೀಗ ಮುನ್ನೆಲೆಗೆ ಬಂದಿವೆ.

ಮುಖ್ಯಮಂತ್ರಿಗಳ ಮೊದಲ ಭೇಟಿಯಲ್ಲೇ ನಡೆದಿರುವ ಈ ಅಸಮಾಧಾನದ ಪ್ರದರ್ಶನವು ಮುಂದಿನ ದಿನಗಳಲ್ಲಿ ಜಿಲ್ಲಾ ಕಾಂಗ್ರೆಸ್ ರಾಜಕಾರಣದಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಕುತೂಹಲ ಮೂಡಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande