
ಬಾಗಲಕೋಟೆ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಗೆ ಒಳಗಾಗಿ ಪುನರ್ವಸತಿ ಇತಿಹಾಸ ಹೊಂದಿರುವ ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಕೊಡುಗೆ ದೊರೆತಿದೆ. ನವನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರಸಕ್ತ ಸಾಲಿನ ನೀಟ್ ಕೌನ್ಸಿಲಿಂಗ್ ಸೀಟ್ ಮ್ಯಾಟ್ರಿಕ್ಸ್ ಪಟ್ಟಿಯಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿದ್ದು, 100 ಎಂಬಿಬಿಎಸ್ ಸರ್ಕಾರಿ ಸೀಟುಗಳು ಲಭ್ಯವಾಗುವಂತಾಗಿದೆ.
ಇದರೊಂದಿಗೆ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ವೈದ್ಯಕೀಯ ಶಿಕ್ಷಣ ಪಡೆಯಲು ಹೊಸ ಅವಕಾಶ ಸೃಷ್ಟಿಯಾಗಿದ್ದು, ಬಾಗಲಕೋಟೆ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿ ಪರಿಣಮಿಸಿದೆ.
ರಾಜ್ಯ ಸರ್ಕಾರದ ಬಜೆಟ್ ಘೋಷಣೆಯ ಬಳಿಕ ವೇಗ ಪಡೆದುಕೊಂಡಿದ್ದ ವೈದ್ಯಕೀಯ ಕಾಲೇಜು ಸ್ಥಾಪನೆ ಯೋಜನೆ, ಕೇವಲ 15 ತಿಂಗಳ ಅವಧಿಯಲ್ಲಿ ವಿವಿಧ ಹಂತಗಳ ಆಡಳಿತಾತ್ಮಕ ಪ್ರಕ್ರಿಯೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ ನೀಟ್ ಕೌನ್ಸಿಲಿಂಗ್ ಹಂತಕ್ಕೆ ತಲುಪಿರುವುದು ವಿಶೇಷವಾಗಿದೆ.
₹450 ಕೋಟಿ ವೆಚ್ಚದ ಮಹತ್ವಾಕಾಂಕ್ಷೆಯ ಯೋಜನೆ
2025ರ ಮಾರ್ಚ್ 7ರಂದು ಮಂಡನೆಯಾದ ರಾಜ್ಯ ಬಜೆಟ್ನಲ್ಲಿ ಬಾಗಲಕೋಟೆಯಲ್ಲಿ ₹450 ಕೋಟಿ ವೆಚ್ಚದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಈ ಘೋಷಣೆಯ ನಂತರ ಯೋಜನೆಗೆ ಅಗತ್ಯ ಕ್ರಮಗಳು ಆರಂಭಗೊಂಡವು. 2025ರ ಮೇ 28ರಂದು ಬಾಗಲಕೋಟೆಯವರಾದ ಹಿರಿಯ ಪ್ರಸೂತಿ ತಜ್ಞ ಹಾಗೂ ಪ್ರಾಧ್ಯಾಪಕ ಡಾ. ಬಿ. ಎಚ್. ನಾರಾಯಣಿ ಅವರನ್ನು ನೂತನ ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಲಾಯಿತು.
ಅಧಿಕಾರ ಸ್ವೀಕರಿಸಿದ ಬಳಿಕ ಕಾಲೇಜಿನ ಸ್ಥಾಪನೆಗೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ, ಭೂಮಿ, ಸಿಬ್ಬಂದಿ ನೇಮಕಾತಿ, ಆಡಳಿತಾತ್ಮಕ ಸಿದ್ಧತೆ ಸೇರಿದಂತೆ ವಿವಿಧ ಕಾರ್ಯಗಳಿಗೆ ವೇಗ ನೀಡಲಾಯಿತು. ಸಂಬಂಧಿಸಿದ ಇಲಾಖೆಗಳು ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಮನ್ವಯ ಸಾಧಿಸುವ ಮೂಲಕ ಕಾಲೇಜನ್ನು ನಿಗದಿತ ಅವಧಿಯಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಸಿದ್ಧಗೊಳಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಯಿತು.
42 ಎಕರೆ ಭೂಮಿ: ಶಂಕುಸ್ಥಾಪನೆಯಿಂದ ಮುಂದಿನ ಹಂತಕ್ಕೆ
ನವನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಿದ್ದ ಭೂಮಿ ಪಡೆಯುವ ಪ್ರಕ್ರಿಯೆಯಲ್ಲೂ ವಿಶೇಷ ಅಧಿಕಾರಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಮಹತ್ವದ ಪಾತ್ರ ವಹಿಸಿದರು. BTDA ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಸುಮಾರು 42 ಎಕರೆ ಭೂಮಿ ಪಡೆಯುವ ಪ್ರಕ್ರಿಯೆಗೆ ವೇಗ ನೀಡಲಾಯಿತು.
ಇದರ ಮುಂದುವರಿದ ಹಂತವಾಗಿ 2026ರ ಮಾರ್ಚ್ನಲ್ಲಿ ಮುಖ್ಯಮಂತ್ರಿ ಅವರಿಂದ ವೈದ್ಯಕೀಯ ಕಾಲೇಜಿಗೆ ಶಂಕುಸ್ಥಾಪನೆ ನೆರವೇರಿತು. ಇದೀಗ ಕಾಲೇಜು ನೀಟ್ ಕೌನ್ಸಿಲಿಂಗ್ ಸೀಟ್ ಮ್ಯಾಟ್ರಿಕ್ಸ್ನಲ್ಲಿ ಅಧಿಕೃತವಾಗಿ ಸ್ಥಾನ ಪಡೆದಿರುವುದು ಯೋಜನೆ ಮತ್ತೊಂದು ನಿರ್ಣಾಯಕ ಹಂತ ತಲುಪಿರುವುದನ್ನು ಸೂಚಿಸುತ್ತದೆ.
ಎನ್ಎಂಸಿ ಸವಾಲಿನ ಬಳಿಕ ತ್ವರಿತ ಕ್ರಮ
2026ರ ಜುಲೈನಲ್ಲಿ ರಾಷ್ಟ್ರೀಯ ವೈದ್ಯಕೀಯ ಆಯೋಗ ಸಿಬ್ಬಂದಿ ಹಾಗೂ ಕೆಲವು ತಾಂತ್ರಿಕ ಅಂಶಗಳಿಗೆ ಸಂಬಂಧಿಸಿದ ಕಾರಣಗಳಿಂದ ಆರಂಭಿಕ ಹಂತದಲ್ಲಿ ಅನುಮತಿ ದೊರೆಯದಿರುವುದು ಕಾಲೇಜಿನ ಭವಿಷ್ಯದ ಕುರಿತು ಆತಂಕಕ್ಕೆ ಕಾರಣವಾಗಿತ್ತು.
ಆದರೆ ಇದನ್ನು ಸವಾಲಾಗಿ ಸ್ವೀಕರಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ, ನಿರ್ದೇಶನಾಲಯ ಹಾಗೂ ಕಾಲೇಜಿನ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತ್ವರಿತವಾಗಿ ಕೈಗೊಂಡರು. ಅಗತ್ಯ ಬೋಧಕ ಸಿಬ್ಬಂದಿ ನೇಮಕಾತಿ, ಮೂಲಸೌಕರ್ಯ ಸುಧಾರಣೆ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಸಂಬಂಧಿಸಿದ ನಿಯಮಾವಳಿಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಯಿತು.
ವಿಶೇಷ ವಾಕ್-ಇನ್ ಸಂದರ್ಶನಗಳ ಮೂಲಕ ಬೋಧಕ ಸಿಬ್ಬಂದಿ ನೇಮಕಾತಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ, ಜಿಲ್ಲಾ ಆಸ್ಪತ್ರೆಯನ್ನು ಬೋಧನಾ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವ ಕಾರ್ಯಕ್ಕೂ ಒತ್ತು ನೀಡಲಾಯಿತು.ಇದಲ್ಲದೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ಕೇಂದ್ರೀಯ ಪೋರ್ಟಲ್ಗೆ ಸಂಪರ್ಕಿಸುವುದು ಸೇರಿದಂತೆ ಅಗತ್ಯ ತಾಂತ್ರಿಕ ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ಮೂಲಕ ಕಾಲೇಜನ್ನು ನೀಟ್ ಕೌನ್ಸಿಲಿಂಗ್ ಪ್ರಕ್ರಿಯೆಗೆ ತರಲು ಸಾಧ್ಯವಾಯಿತು.
ಜಿಲ್ಲೆಯ ವಿದ್ಯಾರ್ಥಿಗಳಿಗೆ 100 ಸರ್ಕಾರಿ ಎಂಬಿಬಿಎಸ್ ಸೀಟು
ಬಾಗಲಕೋಟೆ ಸರ್ಕಾರಿ ವೈದ್ಯಕೀಯ ಕಾಲೇಜು ನೀಟ್ ಕೌನ್ಸಿಲಿಂಗ್ ಪಟ್ಟಿಯಲ್ಲಿ ಅಧಿಕೃತವಾಗಿ ಸೇರ್ಪಡೆಯಾಗಿರುವುದರಿಂದ ಪ್ರಸಕ್ತ ಶೈಕ್ಷಣಿಕ ಸಾಲಿನಿಂದಲೇ 100 ಸರ್ಕಾರಿ ಎಂಬಿಬಿಎಸ್ ಸೀಟುಗಳು ಲಭ್ಯವಾಗಲಿವೆ. ಇದು ಜಿಲ್ಲೆಯ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷವಾಗಿ ಮಹತ್ವದ ಅವಕಾಶವಾಗಿದೆ. ವೈದ್ಯಕೀಯ ಶಿಕ್ಷಣ ಪಡೆಯಲು ರಾಜ್ಯದ ವಿವಿಧ ನಗರಗಳಿಗೆ ತೆರಳಬೇಕಾಗಿದ್ದ ಜಿಲ್ಲೆಯ ವಿದ್ಯಾರ್ಥಿಗಳಿಗೆ ತಮ್ಮದೇ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜಿನ ಮೂಲಕ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶ ದೊರೆಯಲಿದೆ.
ವೈದ್ಯಕೀಯ ಶಿಕ್ಷಣದ ವೆಚ್ಚವನ್ನು ಭರಿಸಲು ಕಷ್ಟಪಡುವ ಕುಟುಂಬಗಳ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜಿನ ಸೀಟುಗಳು ದೊಡ್ಡ ನೆರವಾಗುವ ನಿರೀಕ್ಷೆಯಿದೆ. ಅಲ್ಲದೆ, ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯರಾಗುವ ಕನಸನ್ನು ಸಾಕಾರಗೊಳಿಸಲು ಈ ಕಾಲೇಜು ಹೊಸ ವೇದಿಕೆಯಾಗಲಿದೆ.
ಆರೋಗ್ಯ ಸೇವೆಗಳಿಗೂ ಬಲ
ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭವಾಗುವುದರಿಂದ ಕೇವಲ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಮಾತ್ರವಲ್ಲದೆ ಜಿಲ್ಲೆಯ ಆರೋಗ್ಯ ಸೇವಾ ವ್ಯವಸ್ಥೆಗೂ ಹೆಚ್ಚಿನ ಬಲ ಸಿಗುವ ನಿರೀಕ್ಷೆಯಿದೆ.
ವೈದ್ಯಕೀಯ ಕಾಲೇಜಿನೊಂದಿಗೆ ಬೋಧನಾ ಆಸ್ಪತ್ರೆ ವ್ಯವಸ್ಥೆ ಬಲಗೊಳ್ಳುವುದರಿಂದ ಬಾಗಲಕೋಟೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರಿಗೆ ಹೆಚ್ಚಿನ ಗುಣಮಟ್ಟದ ಹಾಗೂ ತಜ್ಞ ವೈದ್ಯಕೀಯ ಸೇವೆಗಳು ಸ್ಥಳೀಯವಾಗಿಯೇ ಲಭ್ಯವಾಗುವ ಸಾಧ್ಯತೆ ಇದೆ.
ಮುಂದಿನ ದಿನಗಳಲ್ಲಿ ವಿವಿಧ ವೈದ್ಯಕೀಯ ವಿಭಾಗಗಳು, ತಜ್ಞ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳು ವಿಸ್ತರಿಸುವುದರಿಂದ ಜಿಲ್ಲೆಯ ಒಟ್ಟಾರೆ ಆರೋಗ್ಯ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ನಿರೀಕ್ಷಿಸಲಾಗಿದೆ.
ಮುಳುಗಡೆ ಜಿಲ್ಲೆಯ ವೈದ್ಯಕೀಯ ಶಿಕ್ಷಣದ ಹೊಸ ಅಧ್ಯಾಯ
ಆಲಮಟ್ಟಿ ಜಲಾಶಯದ ಹಿನ್ನೀರಿನಿಂದ ಮುಳುಗಡೆ ಮತ್ತು ಪುನರ್ವಸತಿಯ ಸಂಕಷ್ಟಗಳನ್ನು ಎದುರಿಸಿರುವ ಬಾಗಲಕೋಟೆ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುತ್ತಿರುವುದು ಅಭಿವೃದ್ಧಿಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.
ರಾಜ್ಯ ಬಜೆಟ್ನಲ್ಲಿ ಘೋಷಣೆಯಾದ ಯೋಜನೆ ಕೇವಲ 15 ತಿಂಗಳ ಅವಧಿಯಲ್ಲಿ ನೀಟ್ ಕೌನ್ಸಿಲಿಂಗ್ ಪಟ್ಟಿಗೆ ಸೇರ್ಪಡೆಯಾಗಿರುವುದು ಗಮನಾರ್ಹ ಸಾಧನೆಯಾಗಿದೆ. ಯೋಜನೆಗೆ ಶ್ರಮಿಸಿದ ವೈದ್ಯಕೀಯ ಶಿಕ್ಷಣ ಇಲಾಖೆ, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಇಲಾಖೆಗಳ ಸಮನ್ವಯದ ಫಲವಾಗಿ ಈ ಹಂತ ತಲುಪಲು ಸಾಧ್ಯವಾಗಿದೆ.
ವಿಶೇಷ ಅಧಿಕಾರಿ ಆದ ನನ್ನ ನೇತೃತ್ವದಲ್ಲಿ ನಡೆದ ನಿರಂತರ ಪ್ರಯತ್ನಗಳು, ಸಿಬ್ಬಂದಿ ನೇಮಕಾತಿ, ಮೂಲಸೌಕರ್ಯ ಸಿದ್ಧತೆ ಹಾಗೂ ವಿವಿಧ ಆಡಳಿತಾತ್ಮಕ ಕ್ರಮಗಳು ಕಾಲೇಜಿನ ಸ್ಥಾಪನೆಗೆ ವೇಗ ನೀಡಿವೆ ಎಂದು ಡಾ. ಬಿ. ಎಚ್. ನಾರಾಯಣಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande