ಬೀದರ್: ಬರ ಘೋಷಣೆಗೆ ಆಗ್ರಹಿಸಿ ಮುಂದುವರೆದ ರೈತರ ಧರಣಿ ಸತ್ಯಾಗ್ರಹ
ರೈತರ ಧರಣಿ ಸತ್ಯಾಗ್ರಹ ಮುಂದುವರಿಕೆ; ಸರ್ಕಾರದ ಮೌನಕ್ಕೆ ಆಕ್ರೋಶ
ಬೀದರ್: ಬರ ಘೋಷಣೆಗೆ ಆಗ್ರಹಿಸಿ ಮುಂದುವರೆದ ರೈತರ ಧರಣಿ ಸತ್ಯಾಗ್ರಹ


ಬೀದರ್, 04 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಭಾಲ್ಕಿ, ಹುಲಸೂರ್, ಔರಾದ್ ಹಾಗೂ ಕಮಲನಗರ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ಭಾಲ್ಕಿಯ ಗಾಂಧಿ ಚೌಕ್ ಬಳಿ ನಡೆಯುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಮುಂದುವರೆದಿದೆ.

ನಿರಂತರ ಸತ್ಯಾಗ್ರಹ ಮುಂದುವರಿದಿದ್ದರೂ ರಾಜ್ಯ ಸರ್ಕಾರದಿಂದ ಯಾವುದೇ ಅಧಿಕೃತ ಸ್ಪಂದನೆ ಸಿಕ್ಕಿಲ್ಲ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ಹಾಗೂ ಗಮನ ಸೆಳೆಯುವ ಉದ್ದೇಶದಿಂದ ರೈತರು ವಿನೂತನ ಪ್ರತಿಭಟನೆ ನಡೆಸಿ, ಹೋರಾಟದ ಸ್ಥಳದಲ್ಲೇ ಮುಂಜಾನೆ ರಸ್ತೆ ಮೇಲೆಯೇ ಸ್ನಾನ ಮಾಡುವ ಮೂಲಕ ಆಕ್ರೋಶ ಹೊರಹಾಕಿದರು.

ಪ್ರಮುಖ ಬೇಡಿಕೆಗಳು:ಭಾಲ್ಕಿ, ಹುಲಸೂರ್, ಔರಾದ್ ಮತ್ತು ಕಮಲನಗರ ತಾಲೂಕುಗಳನ್ನು ತಕ್ಷಣವೇ ಅಧಿಕೃತ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು.ಬೆಳೆ ನಷ್ಟ ಅನುಭವಿಸಿರುವ ಪ್ರತಿ ಎಕರೆ ಜಮೀನಿಗೆ ತಲಾ 50,000 ರೂಪಾಯಿಗಳ ಪರಿಹಾರವನ್ನು ರೈತರ ಖಾತೆಗೆ ಜಮೆ ಮಾಡಬೇಕು.ಈಗಾಗಲೇ ಬೆಳೆ ವಿಮೆ ಕಟ್ಟಿSರುವ ರೈತರಿಗೆ ಬಾಕಿ ಇರುವ ವಿಮಾ ಪರಿಹಾರದ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು.

ಬೇಡಿಕೆಗಳು ಈಡೇರುವವರೆಗೆ ಯಾವುದೇ ಕಾರಣಕ್ಕೂ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ರೈತರಿಗೆ, ವಿವಿಧ ಸಂಘಟನೆಗಳ ಮುಖಂಡರು ಹಾಗೂ ಸ್ಥಳೀಯ ಹೋರಾಟಗಾರರು ಭೇಟಿ ನೀಡಿ ಬೆಂಬಲ ಸೂಚಿಸಿದ್ದಾರೆ. ತುರ್ತಾಗಿ ರೈತರ ಸಂಕಷ್ಟಗಳಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande