
ಬೆಂಗಳೂರು, 30 ಸೆಪ್ಟೆಂಬರ್ (ಹಿ.ಸ.):
ಬೆಂಗಳೂರಿನಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಕರಡು ಪಾರ್ಕಿಂಗ್ ನೀತಿಯನ್ನು ವಿರೋಧಿಸಿರುವ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ, ಇದು ಹೊಸ ಪಾರ್ಕಿಂಗ್ ನೀತಿಯಲ್ಲ, ಹಣ ಸಂಗ್ರಹಿಸುವ ಹೊಸ ವಿಧಾನ ಎಂದು ಟೀಕಿಸಿದ್ದಾರೆ.
ಜಿಬಿಎ ರೂಪಿಸಿರುವ ಕರಡು ಪಾರ್ಕಿಂಗ್ ನೀತಿಗೆ 800ಕ್ಕೂ ಹೆಚ್ಚು ಆಕ್ಷೇಪಗಳು ಬಂದಿರುವುದು, ಸರ್ಕಾರದ ಅವೈಜ್ಞಾನಿಕ ನೀತಿಯನ್ನು ಜನರು ತೀವ್ರವಾಗಿ ವಿರೋಧಿಸುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ವಾಹನಗಳನ್ನು ನಿಲುಗಡೆ ಮಾಡಲು ವಾರ್ಷಿಕ 15ರಿಂದ 25 ಸಾವಿರ ರೂ.ವರೆಗೆ ಶುಲ್ಕ ವಿಧಿಸುವ ಪ್ರಸ್ತಾವನೆ ಖಾಲಿಯಾಗಿರುವ ಸರ್ಕಾರದ ಖಜಾನೆಯನ್ನು ತುಂಬಿಸುವ ಪ್ರಯತ್ನವಾಗಿದೆ. ಈ ವಿಚಾರ ಬೆಂಗಳೂರಿನ ಜನರಿಗೆ ಸ್ಪಷ್ಟವಾಗಿ ತಿಳಿದಿದೆ ಎಂದು ಅಶೋಕ ಆರೋಪಿಸಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರನ್ನು ಉದ್ದೇಶಿಸಿ ಮಾತನಾಡಿದ ಅವರು, ಒತ್ತುವರಿ ತೆರವು ಹಾಗೂ ಕಸಮುಕ್ತ ಬೆಂಗಳೂರು ಅಭಿಯಾನಗಳು ಯಶಸ್ವಿಯಾಗಿಲ್ಲ ಎಂದು ಟೀಕಿಸಿದರು. ಕನಿಷ್ಠ ಪಾರ್ಕಿಂಗ್ ನೀತಿಯನ್ನಾದರೂ ರದ್ದುಪಡಿಸಬೇಕು ಅಥವಾ 15ರಿಂದ 20 ಸಾವಿರ ರೂ. ಶುಲ್ಕ ವಿಧಿಸುವ ನಿಯಮದಿಂದ ಜನರಿಗೆ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಈ ಕುರಿತು ಮನವರಿಕೆ ಮಾಡಿ, ಕರಡು ನೀತಿಗೆ ಸಾರ್ವಜನಿಕರಿಂದ ವ್ಯಕ್ತವಾಗಿರುವ ವಿರೋಧವನ್ನು ತಿಳಿಸಬೇಕು. ಪಾರ್ಕಿಂಗ್ ಮೂಲಕವೂ ಆದಾಯ ಸಂಗ್ರಹಿಸುವ ಜನವಿರೋಧಿ ನಿಲುವನ್ನು ಸರ್ಕಾರ ಕೈಬಿಡಬೇಕು ಎಂದು ಅಶೋಕ ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.