
ಬಡ್ಗಾಮ್, 30 ಸೆಪ್ಟೆಂಬರ್ (ಹಿ.ಸ.):
ಜಮ್ಮು-ಕಾಶ್ಮೀರದ ಬಡ್ಗಾಂ ಜಿಲ್ಲೆಯ ಗುರುವಟಕಾಲನ್ ಪ್ರದೇಶದಲ್ಲಿ ಮಂಗಳವಾರ-ಬುಧವಾರದ ಮಧ್ಯರಾತ್ರಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಯ ಓರ್ವ ಉಗ್ರ ಹತನಾಗಿದ್ದಾನೆ. ಹತನಾದ ಉಗ್ರನನ್ನು ಸುಲೇಮಾನ್ ಶಾ ಅಲಿಯಾಸ್ ಮೂಸಾ ಎಂದು ಪೊಲೀಸ್ ಅಧಿಕಾರಿಗಳು ಗುರುತಿಸಿದ್ದಾರೆ.
ಉಗ್ರರ ಉಪಸ್ಥಿತಿಯ ಕುರಿತು ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ಆರಂಭಿಸಿದ್ದವು. ಈ ವೇಳೆ ಉಗ್ರರ ಚಲನವಲನ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಎಚ್ಚರಿಕೆ ನೀಡಿ ಸವಾಲು ಹಾಕಿದಾಗ ಉಗ್ರರು ಗುಂಡಿನ ದಾಳಿ ನಡೆಸಿದರು. ಇದಕ್ಕೆ ಪ್ರತಿಯಾಗಿ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿದ್ದು, ನಡೆದ ತೀವ್ರ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರ ಹತನಾಗಿದ್ದಾನೆ.
ಕೇಂದ್ರ ಕಾಶ್ಮೀರದ ಕೊರಾಗ್ ಹಾಗೂ ಯೂಸ್ಮರ್ಗ್‌ನ ಸಾಮಾನ್ಯ ಪ್ರದೇಶದಲ್ಲಿ ಇತರ ಭದ್ರತಾ ಪಡೆಗಳೊಂದಿಗೆ ಸೇನೆ ಕಾರ್ಯಾಚರಣೆ ನಡೆಸಿದೆ. ಕಾರ್ಯಾಚರಣೆಯ ವೇಳೆ ಮೂಸಾನನ್ನು ದೂಧ್‌ಪಥ್ರಿಯ ದೂರದ ಅರಣ್ಯ ಪ್ರದೇಶದಲ್ಲಿ ಹತ್ಯೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಶ್ಮೀರದ ಚಿನಾರ್ ಕೋರ್ ಹತನಾದ ಉಗ್ರನ ಗುರುತನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಪೊಲೀಸ್ ಅಧಿಕಾರಿಗಳು ಹತನಾದ ಉಗ್ರನನ್ನು ಸುಲೇಮಾನ್ ಶಾ ಅಲಿಯಾಸ್ ಮೂಸಾ ಎಂದು ಗುರುತಿಸಿದ್ದಾರೆ. ಕಾರ್ಯಾಚರಣೆ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ.
ಮೂಸಾ ಪೀರ್ ಪಂಜಾಲ್ ಪರ್ವತಶ್ರೇಣಿಯ ಎರಡೂ ಬದಿಗಳಲ್ಲಿ ನಡೆದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಯೂಸ್ಮರ್ಗ್ ಬೆಟ್ಟ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಿಂದ ಮೂಸಾ ತಪ್ಪಿಸಿಕೊಂಡಿದ್ದ. ಆ ಎನ್‌ಕೌಂಟರ್‌ನಲ್ಲಿ ಆತನ ಆಪ್ತ ಯಾಸಿರ್ ಸೆಪ್ಟೆಂಬರ್ 5ರಂದು ಹತನಾಗಿದ್ದ.
ಮೂಸಾ ಹತ್ಯೆ ಜಮ್ಮು-ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ದೊಡ್ಡ ಹೊಡೆತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.