
ಬೆಂಗಳೂರು, 29 ಸೆಪ್ಟೆಂಬರ್ (ಹಿ.ಸ.):
ಪ್ರೆಸಿಡೆನ್ಸಿ ವಿಶ್ವವಿದ್ಯಾಲಯದಲ್ಲಿ ಸೆ.26ರಂದು ನಡೆದ ‘ಕಲ್-ಉತ್ಸವ್’ 2026 ಸಾಂಸ್ಕೃತಿಕ ಹಬ್ಬವು ದೇಶದ ವಿವಿಧ ರಾಜ್ಯಗಳ ಕಲೆ, ಸಂಸ್ಕೃತಿ ಮತ್ತು ಜನಪದ ಪರಂಪರೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸಿತು. ಕಾರ್ಯಕ್ರಮದಲ್ಲಿ 8,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು ಎಂದು ಮಂಗಳವಾರ ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
ರಾಜ್ಯವಾರು ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತಮಿಳುನಾಡಿನ ಪರೈ ಮತ್ತು ಕಲೈ ಕೂತು, ಕೇರಳದ ಚೆಂಡಮೇಳ, ಕಥಕಳಿ ಹಾಗೂ ಮೋಹಿನಿಯಾಟ್ಟಂ, ಕರ್ನಾಟಕದ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ, ಪೂಜಾ ಕುಣಿತ, ಯಕ್ಷಗಾನ ಸೇರಿದಂತೆ ವಿವಿಧ ರಾಜ್ಯಗಳ ಜಾನಪದ ಕಲೆಗಳು ಗಮನ ಸೆಳೆದವು.
ಉತ್ತರ ಪ್ರದೇಶ ಮತ್ತು ಬಿಹಾರದ ರಾಧಾ–ಕೃಷ್ಣ ಪರಂಪರೆ, ರಾಜಸ್ಥಾನದ ರಾಜಾ–ರಾಣಿ ರೂಪಕಗಳು, ಈಶಾನ್ಯ ರಾಜ್ಯಗಳ ಸಾಂಸ್ಕೃತಿಕ ಪ್ರದರ್ಶನ, ಪಶ್ಚಿಮ ಬಂಗಾಳದ ಧುನೂಚಿ ನೃತ್ಯ, ಒಡಿಶಾದ ಜಗನ್ನಾಥ ರಥದ ಮಾದರಿ, ಪಂಜಾಬ್ನ ಭಾಂಗ್ರಾ ಹಾಗೂ ಮಹಾರಾಷ್ಟ್ರ–ಗೋವಾದ ಲಾವಣಿ ಪ್ರದರ್ಶನಗಳು ಉತ್ಸವಕ್ಕೆ ಮತ್ತಷ್ಟು ಮೆರುಗು ನೀಡಿದವು.
ನಂತರ ಮುಖ್ಯ ವೇದಿಕೆಯಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ ವಿದ್ಯಾರ್ಥಿಗಳ ಜನಪದ ನೃತ್ಯ ಪ್ರದರ್ಶನ ನಡೆಯಿತು. ಸಂಜೆ ದಾಂಡಿಯಾ ಮತ್ತು ಗರ್ಬಾ ಕಾರ್ಯಕ್ರಮದೊಂದಿಗೆ ಡಿಜೆ ಸಂಗೀತವೂ ಆಯೋಜಿಸಲಾಗಿತ್ತು.
ಸಾಂಪ್ರದಾಯಿಕ ಕಲೆಗಳ ಜೊತೆಗೆ ಆಧುನಿಕ ಸಂಗೀತ ಮತ್ತು ನೃತ್ಯವನ್ನು ಸಂಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ವಿನಿಮಯಕ್ಕೆ ವೇದಿಕೆ ಕಲ್ಪಿಸಲಾಯಿತು.
“ಕಲ್-ಉತ್ಸವ್ ಕೇವಲ ಸಾಂಸ್ಕೃತಿಕ ಕಾರ್ಯಕ್ರಮವಲ್ಲ; ಭಾರತದ ವೈವಿಧ್ಯಮಯ ಪರಂಪರೆಗಳನ್ನು ಒಂದೇ ವೇದಿಕೆಯಲ್ಲಿ ಸಂಭ್ರಮಿಸುವ ಉತ್ಸವವಾಗಿದೆ.
ವಿವಿಧ ಸಂಸ್ಕೃತಿಗಳು ಒಂದಾಗಿ ಸೇರುವ ಮೂಲಕ ಏಕತೆ, ಸೇರಿದ ಭಾವನೆ ಮತ್ತು ಸಾಂಸ್ಕೃತಿಕ ಹೆಮ್ಮೆಯ ಸಂದೇಶವನ್ನು ಈ ಕಾರ್ಯಕ್ರಮ ಸಾರಿದೆ” ಎಂದು ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R