
ಕೋಲಾರ, 29 ಸೆಪ್ಟೆಂಬರ್ (ಹಿ.ಸ.) :
ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವಲ್ಲಿ ಮತ್ತು ಸಮಾಜಕ್ಕೆ ಕಳಂಕವಾಗಿರುವ ಜೀತ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಪಾತ್ರ ಅತ್ಯಂತ ನಿರ್ಣಾಯಕವಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ಪ್ರಭು ನೀಲಾಚಾರಿ ಬಡಿಗೇರ ತಿಳಿಸಿದರು.
ಕೋಲಾರ ನಗರದ ತಾಲ್ಲೂಕು ಪಂಚಾಯಿತಿ ಕಾರ್ಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮುಕ್ತಿ ಒಕ್ಕೂಟ ಕರ್ನಾಟಕ ಮತ್ತು ಶಾಂತ ಜೀವ ಜ್ಯೋತಿ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಮಾನವ ಕಳ್ಳಸಾಗಾಣಿಕೆ ತಡೆಗಟ್ಟುವಿಕೆ ಮತ್ತು ಜೀತ ಪದ್ಧತಿ ನಿರ್ಮೂಲನೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಪಾತ್ರ ಕುರಿತ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲೂ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಬಡತನ ಮತ್ತು ಅಜ್ಞಾನದ ಲಾಭ ಪಡೆದು ಮಾನವ ಕಳ್ಳಸಾಗಾಣಿಕೆ ಹಾಗೂ ಜೀತ ಪದ್ಧತಿಯಂತಹ ಅಮಾನವೀಯ ಚಟುವಟಿಕೆಗಳು ರಹಸ್ಯವಾಗಿ ನಡೆಯುತ್ತಿರುವುದು ವಿಷಾದಕರವಾಗಿದೆ. ಇಂತಹ ಶೋಷಣೆಗಳನ್ನು ಪತ್ತೆ ಹಚ್ಚಲು ಸರಕಾರಿ ವ್ಯವಸ್ಥೆಯೊಂದಿಗೆ ಸ್ವಯಂ ಸೇವಾ ಸಂಸ್ಥೆಗಳು ಕೈಜೋಡಿಸಬೇಕು. ಬೇರು ಮಟ್ಟದಲ್ಲಿ ಕೆಲಸ ಮಾಡುವ ಸ್ವಯಂ ಸೇವಾ ಸಂಸ್ಥೆಗಳು ಬಾಧಿತರಿಗೆ ಕಾನೂನು ನೆರವು ನೀಡಲು ಹಾಗೂ ಅವರನ್ನು ಮುಖ್ಯವಾಹಿನಿಗೆ ತರಲು ಸೇತುವೆಯಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಐಜೆಎಂ ವಿಭಾಗೀಯ ವ್ಯವಸ್ಥಾಪಕರಾದ ಎ. ರಾಜೇಂದ್ರನ್ ಮಾತನಾಡಿ ರಾಜ್ಯವನ್ನು ಜೀತ ಮುಕ್ತ ಕರ್ನಾಟಕವನ್ನಾಗಿ ಮಾಡುವಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ತಳಮಟ್ಟದಲ್ಲಿ ಶೋಷಣೆಗೊಳಗಾದವರನ್ನು ಗುರುತಿಸಿ ಅವರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಎನ್ಜಿಒಗಳು ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಬೇಕು ಎಂದು ಪ್ರತಿಪಾದಿಸಿದರು.
ಬಂಧಿತ ಜೀತ ಕಾರ್ಮಿಕರನ್ನು ವಿಮುಕ್ತಿಗೊಳಿಸುವುದು ಮಾತ್ರವಲ್ಲದೆ, ಅವರಿಗೆ ಸರ್ಕಾರದಿಂದ ಸಿಗುವ ಪರಿಹಾರ ಹಾಗೂ ಪುನರ್ವಸತಿ ಸೌಲಭ್ಯಗಳನ್ನು ತಲುಪಿಸುವುದು ಅಗತ್ಯವಾಗಿದೆ. ಮಾನವ ಕಳ್ಳಸಾಗಾಣಿಕೆಗೆ ಒಳಗಾಗುವ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಕಾನೂನಿನಲ್ಲಿ ಕಠಿಣ ಶಿಕ್ಷೆ ಇದೆ. ಸಾರ್ವಜನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ರೆಡ್ಡಿ, ಶಾಂತ ಜೀವ ಜ್ಯೋತಿ ಸಂಸ್ಥೆಯ ನಿರ್ದೇಶಕರಾದ ಪಿ. ಷಣ್ಮುಗ ಸುಂದರಮ್, ಡೆಸ್ಲೀ,ಬಾಲ ನ್ಯಾಯ ಮಂಡಳಿ ಸದಸ್ಯರಾದ ಎಸ್.ಎಚ್. ಚೌಡಪ್ಪ, ಅ.ನಾ. ಹರೀಶ್, ವಕೀಲರು ಹಾಗೂ ಸಂಪನ್ಮೂಲ ವ್ಯಕ್ತಿ ಪೇಬಾ ನಿಷಾ, ಮತ್ತು ಕಾರ್ಯಕ್ರಮದ ಸಂಯೋಜಕರಾದ ಮಂಜುನಾಥ ಎಸ್. ಹಾಗೂ ಮಂಜೇಶ್ ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್