
ಕೋಲಾರ, 29 ಸೆಪ್ಟೆಂಬರ್ (ಹಿ.ಸ) :
ಕನ್ನಡ ಭಾಷೆಗೆ ಯಾವುದೇ ಮಡಿವಂತಿಕೆ ಇಲ್ಲ. ಯಾವುದೇ ಭಾಷೆಯಿಂದ ಜ್ಞಾನ ಹರಿದುಬಂದರೂ ಅದನ್ನು ಸ್ವೀಕರಿಸುತ್ತದೆ. ಹೀಗಾಗಿಯೇ ಕನ್ನಡವು ಭಾರತೀಯ ಇತರ ಭಾಷೆಗಳಿಗಿಂತ ಹೆಚ್ಚಾಗಿ ನಿರಂತರ ಸಮೃದ್ಧಗೊಳ್ಳುತ್ತಲೇ ಇರುವ ಭಾಷೆಯಾಗಿವೆ. ಕನ್ನಡ ಭಾಷೆ ಅಭಿವ್ಯಕ್ತಿ ಕ್ರಮವು ತುಂಬಾ ವಿಶಿಷ್ಟವಾಗಿರುವುದರಿಂದ ಯಾವುದೇ ಭಾಷೆಯ ಕೃತಿಯನ್ನಾದರೂ ಕನ್ನಡೀಕರಿಸಬಹುದಾಗಿದೆ. ಈ ಮೂಲಕ ಕನ್ನಡವೂ ತನ್ನನ್ನು ವಿಸ್ತರಿಸಿಕೊಳ್ಳುತ್ತಾ ಹೋಗುತ್ತದೆ ಎಂದು ಹಿರಿಯ ವಿದ್ವಾಂಸರೂ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಡಾ.ಪ್ರಧಾನ್ ಗುರುದತ್ತ ಅವರು ಅಭಿಪ್ರಾಯಪಟ್ಟರು.
ಬೆಂಗಳೂರಿನ ಕೆ.ನಾರಾಯಣಪುರದಲ್ಲಿರುವ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ‘ಕನ್ನಡ ಅನುವಾದ: ಹೊಸ ಸಾಧ್ಯತೆಗಳು’ ಎಂಬ ವಿಷಯದ ಕುರಿತಾದ ಒಂದು ವಾರದ ರಾಷ್ಟ್ರಮಟ್ಟದ ಆನ್ಲೈನ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
“ಅನುವಾದಗಳ ಮೂಲಕ ಕನ್ನಡ ಭಾಷೆ ಸಾಹಿತ್ಯ ಮತ್ತು ಸಂಸ್ಕೃತಿಯು ಮತ್ತಷ್ಟು ಸಮೃದ್ಧಗೊಳ್ಳುತ್ತದೆ”. ಯಾವುದೇ ಯಾಂತ್ರಿಕ ಅನುವಾದವು ಎಷ್ಟೇ ಮುಂದುವರೆದರೂ ಮೂಲ ಭಾಷೆಯೊಂದರ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಸೂಕ್ಷ್ಮಗಳನ್ನು ಗ್ರಹಿಸುವುದು ಸಾಧ್ಯವಿಲ್ಲ. ಸೃಜನಶೀಲತೆಗೂ ಯಂತ್ರಾನುವಾದ ಎಂದಿಗೂ ಪರ್ಯಾಯವಲ್ಲ. ಕೃತಕ ಬುದ್ಧಿಮತ್ತೆಯ ಮೂಲಕ ನಡೆಯುತ್ತಿರುವ ಅನುವಾದಗಳಲ್ಲಿನ ಅವಾಂತರಗಳನ್ನು ಗಮನಿಸಿದರೆ, ಸಾಹಿತ್ಯಕ್ಷೇತ್ರಕ್ಕೆ ಯಂತ್ರಾನುವಾದವನ್ನು ಪರಿಪೂರ್ಣವಾಗಿ ಅನ್ವಯಿಸುವಷ್ಟು ಕಾಲವು ಪರಿಪಕ್ವವಾಗಿಲ್ಲ. ಯಾವುದೇ ಅನುವಾದದಲ್ಲಿ ಖಚಿತತೆ, ಸಾಮರ್ಥ್ಯ, ಅಡಕಗೊಳಿಸುವಿಕೆ, ಭಾಷಾಭಿವ್ಯಕ್ತಿ ಹಾಗೂ ಶೈಲಿಗಳನ್ನು ಗಮನಿಸಿಕೊಳ್ಳುವುದು ಅತ್ಯಗತ್ಯ ಎಂದರು.
ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ ಕನ್ನಡ ಭಾಷಾ ವಿಭಾಗದ ಮುಖ್ಯಸ್ಥರೂ ಕಾರ್ಯಾಗಾರದ ಪ್ರಧಾನ ಸಂಯೋಜಕರೂ ಆದ ಕ್ಯಾಪ್ಟನ್ ಡಾ.ಸರ್ವೇಶ್ ಬಿ.ಎಸ್. ಸ್ವಾಗತಿಸಿದರು. ಕಾರ್ಯಾಗಾರದ ಸಂಯೋಜಕರೂ ಕನ್ನಡ ಪ್ರಾಧ್ಯಾಪಕರಾದ ಡಾ.ಎಂ.ಭೈರಪ್ಪ ಅವರು ನಿರ್ವಹಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಂದ್ರಶೇಖರ್ ಎನ್., ಡಾ.ಸೈಯದ್ ಮುಯಿನ್, ಡಾ.ರವಿಶಂಕರ್ ಎ.ಕೆ ಹಾಗೂ ಡಾ.ಕಿರಣಕುಮಾರ್ ಎಚ್.ಜಿ ಉಪಸ್ಥಿತರಿದ್ದರು. ಕರ್ನಾಟಕದ ವಿವಿಧ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ಪ್ರಾಧ್ಯಾಪಕರು, ಸಂಶೋಧಕರು, ಸಾಹಿತಿಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್