
ಬಳ್ಳಾರಿ, 29 ಸೆಪ್ಟೆಂಬರ್ (ಹಿ.ಸ.):
ರಾಷ್ಟಿಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಹಾಗೂ ಭವಿಷ್ಯದ ಆರ್ಥಿಕ ಭದ್ರತೆಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ‘ಎನ್.ಪಿ.ಎಸ್ ಸಂಚಯ ಯಾತ್ರೆ’ಯು ಅಕ್ಟೋಬರ್ 4 ರ ಭಾನುವಾರ ಬಳ್ಳಾರಿ ಜಿಲ್ಲೆಗೆ ಆಗಮಿಸಲಿದೆ.
‘ಎನ್.ಪಿ.ಎಸ್ ದಿವಸ್ 2026’ ಅಭಿಯಾನದ ಅಂಗವಾಗಿ ಕೇಂದ್ರ ಹಣಕಾಸು ಸಚಿವರು ಅಕ್ಟೋಬರ್ 1 ರಂದು ನವದೆಹಲಿಯಲ್ಲಿ ಈ ಯಾತ್ರೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ ಅಕ್ಟೋಬರ್ 1 ರಿಂದ 15 ರವರೆಗೆ ರಾಜ್ಯಾದ್ಯಂತ ಈ ಜಾಗೃತಿ ಯಾತ್ರೆ ಸಂಚರಿಸಲಿದ್ದು, ಅದರ ಭಾಗವಾಗಿ ಅಕ್ಟೋಬರ್ 4 ರಂದು ಬಳ್ಳಾರಿಯನ್ನು ತಲುಪಲಿದೆ.
ಬಳ್ಳಾರಿಗೆ ಆಗಮಿಸಲಿರುವ ವಿಶೇಷ ಪ್ರಚಾರ ವಾಹನದಲ್ಲಿ ತರಬೇತಿ ಪಡೆದ ಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರಿಗೆ ಎನ್.ಪಿ.ಎಸ್ ಯೋಜನೆಯ ಪ್ರಯೋಜನಗಳು, ಖಾತೆ ತೆರೆಯುವ ವಿಧಾನ ಮತ್ತು ವಂತಿಗೆ ಪಾವತಿಸುವ ಕುರಿತು ಸ್ಥಳದಲ್ಲೇ ಮಾಹಿತಿ ಹಾಗೂ ಮಾರ್ಗದರ್ಶನ ನೀಡಲಾಗುತ್ತದೆ. ಜೊತೆಗೆ ನಾಗರಿಕರ ಅನುಮಾನಗಳನ್ನು ಪರಿಹರಿಸಿ, ಮಾಹಿತಿ ಕರಪತ್ರಗಳನ್ನು ವಿತರಿಸಲಾಗುತ್ತದೆ.
ಈ ಸಂದರ್ಭದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ಆದ ಕೆನರಾ ಬ್ಯಾಂಕ್ ಸೇರಿದಂತೆ ವಿವಿಧ ಬ್ಯಾಂಕ್ಗಳ ಅಧಿಕಾರಿಗಳು ಹಾಜರಿದ್ದು ಸಾರ್ವಜನಿಕರಿಗೆ ನೆರವು ನೀಡಲಿದ್ದಾರೆ. ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಲೀಡ್ ಬ್ಯಾಂಕ್ ನ ಮ್ಯಾನೇಜರ್ ಗಿರೀಶ್ ವಿ.ಕುಲಕರ್ಣಿ ಅವರು ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್