ಗದಗ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ಮ್ಯಾರಾಥಾನ್ಗೆ ಚಾಲನೆ
ಗದಗ, 29 ಸೆಪ್ಟೆಂಬರ್ (ಹಿ.ಸ.) ಗದಗ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಯುವಜನರು ಎಚ್ಐವಿ–ಏಡ್ಸ್ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.
ಫೋಟೋ


ಗದಗ, 29 ಸೆಪ್ಟೆಂಬರ್ (ಹಿ.ಸ.)

ಗದಗ ಜಿಲ್ಲೆಯಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಇಳಿಮುಖವಾಗುತ್ತಿದ್ದು, ಯುವಜನರು ಎಚ್ಐವಿ–ಏಡ್ಸ್ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡು, ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಸೋಂಕು ನಿಯಂತ್ರಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಕರೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಸೇರಿದಂತೆ ವಿವಿಧ ಇಲಾಖೆಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ಮ್ಯಾರಾಥಾನ್–2026ಕ್ಕೆ ಹಸಿರು ನಿಶಾನೆ ತೋರಿಸಿ ಅವರು ಮಾತನಾಡಿದರು.

ಎಚ್ಐವಿ–ಏಡ್ಸ್ ತಡೆಗಟ್ಟುವ ನಿಟ್ಟಿನಲ್ಲಿ ತೀವ್ರತರವಾದ ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಪ್ರಚಾರಾಂದೋಲನ–2026ರ ಅಂಗವಾಗಿ ಮ್ಯಾರಾಥಾನ್ ಆಯೋಜಿಸಲಾಗಿತ್ತು. ರೆಡ್ ರಿಬ್ಬನ್ ಕಾಲೇಜು ವಿದ್ಯಾರ್ಥಿಗಳಿಗಾಗಿ 5 ಕಿ.ಮೀ. ಮ್ಯಾರಾಥಾನ್ ನಡೆಸಲಾಗಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 250 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಉತ್ಸಾಹದಿಂದ ಪಾಲ್ಗೊಂಡರು.

ಯುವಜನರಲ್ಲಿ ಜಾಗೃತಿ ಅಗತ್ಯ

ಎಚ್ಐವಿ ಸೋಂಕಿನ ಕುರಿತು ಯುವಜನರು ವೈಜ್ಞಾನಿಕ ಹಾಗೂ ವಾಸ್ತವಿಕ ಮಾಹಿತಿಯನ್ನು ತಿಳಿದುಕೊಳ್ಳಬೇಕು. ತಪ್ಪು ಕಲ್ಪನೆಗಳು, ಭಯ, ಕಳಂಕ ಮತ್ತು ತಾರತಮ್ಯದಿಂದ ಎಚ್ಐವಿ ಪೀಡಿತರು ಸಾಮಾಜಿಕವಾಗಿ ತೊಂದರೆ ಅನುಭವಿಸುವಂತಾಗಬಾರದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಾವು ಜಾಗೃತರಾಗುವುದರ ಜೊತೆಗೆ ತಮ್ಮ ಕುಟುಂಬ, ಸ್ನೇಹಿತರು ಹಾಗೂ ಸಮುದಾಯದಲ್ಲಿಯೂ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ತಿಳಿಸಿದರು.

‘ನಿಮ್ಮ ಸ್ಥಿತಿಯನ್ನು ತಿಳಿದುಕೊಳ್ಳಿ’ ಎಂಬ ಸಂದೇಶದೊಂದಿಗೆ ಮೊಬಿಲೈಸೇಶನ್ ಫಾರ್ ಏಡ್ಸ್ ಸುರಕ್ಷಾ ಅಭಿಯಾನ ನಡೆಯುತ್ತಿದೆ. ಜನರು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಗತ್ಯ ಮಾಹಿತಿಯನ್ನು ಪಡೆದುಕೊಳ್ಳಲು ಹಾಗೂ ತಮ್ಮ ಆರೋಗ್ಯದ ಕುರಿತು ಜಾಗೃತರಾಗಲು ಪ್ರೋತ್ಸಾಹಿಸಲಾಗುತ್ತಿದೆ. ಯುವಜನರು ಸಂಯಮ, ಜವಾಬ್ದಾರಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಆರೋಗ್ಯಕರ ಯುವಜನತೆ ದೇಶದ ಸಂಪತ್ತು

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್. ನೀಲಗುಂದ ಮಾತನಾಡಿ, ಯುವಜನರು ತಮ್ಮ ಯೌವನದ ಅವಧಿಯಲ್ಲಿ ಜೀವನವನ್ನು ಜೋಪಾನವಾಗಿ ನಡೆಸಿಕೊಂಡು ಆರೋಗ್ಯಕರ ನಡವಳಿಕೆಗಳನ್ನು ರೂಢಿಸಿಕೊಳ್ಳಬೇಕು. ಆರೋಗ್ಯವಂತ ಯುವ ಸಮುದಾಯ ದೇಶದ ಬಹುದೊಡ್ಡ ಸಂಪತ್ತಾಗಿದ್ದು, ಸಮಾಜದ ಒಳಿತಿಗಾಗಿ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಮಾತನಾಡಿ, ಜಿಲ್ಲೆಯಲ್ಲಿ ಎಚ್ಐವಿ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ಯುವ ಸಮುದಾಯದಲ್ಲಿ ಇನ್ನಷ್ಟು ಜಾಗೃತಿ ಮೂಡಿಸುವ ಮೂಲಕ ಸೋಂಕಿನ ಪ್ರಮಾಣವನ್ನು ಶೂನ್ಯಕ್ಕೆ ತರುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.

ಎಚ್ಐವಿ ಕುರಿತು ಹಲವು ವಿಷಯಗಳ ಅರಿವು

ಮ್ಯಾರಾಥಾನ್ ಆಯೋಜನೆಯ ಪ್ರಮುಖ ಉದ್ದೇಶ ಎಚ್ಐವಿ–ಏಡ್ಸ್ ಕುರಿತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದಾಗಿದೆ. ಎಚ್ಐವಿ ತಡೆಗಟ್ಟುವಿಕೆ, ಲಭ್ಯವಿರುವ ಆರೋಗ್ಯ ಸೇವೆಗಳು, ಉಚಿತ ಪರೀಕ್ಷೆ ಹಾಗೂ ಚಿಕಿತ್ಸಾ ಸೌಲಭ್ಯಗಳು, ಕಳಂಕ ಮತ್ತು ತಾರತಮ್ಯ ನಿವಾರಣೆ, ಎಚ್ಐವಿ/ಏಡ್ಸ್ (ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ–2017, ನ್ಯಾಕೋ ಏಡ್ಸ್ ಆ್ಯಪ್, ಉಚಿತ ಸಹಾಯವಾಣಿ 1097, ಲೈಂಗಿಕವಾಗಿ ಹರಡುವ ಸೋಂಕುಗಳು (ಎಸ್ಟಿಐ) ಸೇರಿದಂತೆ ವಿವಿಧ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಡಾ. ಅರುಂಧತಿ ಕುಲಕರ್ಣಿ ತಿಳಿಸಿದರು.

ಯುವಜನರಲ್ಲಿ ಆರೋಗ್ಯದ ಕುರಿತು ಜವಾಬ್ದಾರಿಯುತ ಮನೋಭಾವ ಬೆಳೆಸುವುದು ಹಾಗೂ ಎಚ್ಐವಿ ಸೋಂಕಿತರೊಂದಿಗೆ ಸಮಾಜದಲ್ಲಿ ಯಾವುದೇ ರೀತಿಯ ಕಳಂಕ ಅಥವಾ ತಾರತಮ್ಯ ತೋರದಂತೆ ಅರಿವು ಮೂಡಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದರು.

250ಕ್ಕೂ ಹೆಚ್ಚು ವಿದ್ಯಾರ್ಥಿಗಳ ಭಾಗಿ

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಕುಲ್ ಜೈನ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ 5 ಕಿ.ಮೀ. ರೆಡ್ ರಿಬ್ಬನ್ ಮ್ಯಾರಾಥಾನ್ಗೆ ಚಾಲನೆ ನೀಡಿದರು. ಮ್ಯಾರಾಥಾನ್ನಲ್ಲಿ ಸುಮಾರು 250 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಭಾಗವಹಿಸಿ ಎಚ್ಐವಿ–ಏಡ್ಸ್ ತಡೆಗಟ್ಟುವಿಕೆ ಕುರಿತು ಜನಜಾಗೃತಿ ಮೂಡಿಸಿದರು.

ಪುರುಷರ ವಿಭಾಗದಲ್ಲಿ ರಮೇಶ ಸಿಂಗಟಾನಕೇರಿ ಪ್ರಥಮ

ಮ್ಯಾರಾಥಾನ್ನ ಪುರುಷರ ವಿಭಾಗದಲ್ಲಿ ರಮೇಶ ಸಿಂಗಟಾನಕೇರಿ ಪ್ರಥಮ ಸ್ಥಾನ ಪಡೆದುಕೊಂಡರು. ಗಂಗಾಧರ ಗಚ್ಚಿನಮಠ ದ್ವಿತೀಯ ಹಾಗೂ ಪ್ರಶಾಂತ ಜಕ್ಕಮ್ಮನವರ ತೃತೀಯ ಸ್ಥಾನ ಪಡೆದುಕೊಂಡು ಪ್ರಶಸ್ತಿಗೆ ಭಾಜನರಾದರು.

ವಿದ್ಯಾರ್ಥಿನಿಯರ ವಿಭಾಗದಲ್ಲಿ ಬಸಮ್ಮ ಕುರಿ ಪ್ರಥಮ ಸ್ಥಾನ, ಅನಸವ್ವ ಕಲ್ಲೂರ ದ್ವಿತೀಯ ಸ್ಥಾನ ಹಾಗೂ ಮಾಲತಿ ಉಮ್ಮಣ್ಣವರ ತೃತೀಯ ಸ್ಥಾನ ಪಡೆದುಕೊಂಡರು. ವಿಜೇತರಿಗೆ ಪ್ರಶಸ್ತಿ ಹಾಗೂ ಮೆಡಲ್ ನೀಡಿ ಗೌರವಿಸಲಾಯಿತು.

ವಿವಿಧ ಇಲಾಖೆ, ಸಂಘ-ಸಂಸ್ಥೆಗಳ ಸಹಯೋಗ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಬೆಂಗಳೂರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಭಾರತೀಯ ವೈದ್ಯಕೀಯ ಸಂಘ (ಐಎಂಎ), ರೋಟರಿ ಸೆಂಟ್ರಲ್ ಗದಗ, ಲಾಯನ್ಸ್ ಕ್ಲಬ್ ಗದಗ–ಬೆಟಗೇರಿ, ಶಿಕ್ಷಣ ಇಲಾಖೆ, ಭಾರತೀಯ ರೆಡ್ಕ್ರಾಸ್ ಸಂಸ್ಥೆ, ಕ್ರೀಡಾ ಇಲಾಖೆ, ರಕ್ಷಣೆ ಸಂಸ್ಥೆ, ಸೃಷ್ಟಿ ಸಂಕುಲ ಸಂಸ್ಥೆ, ಚೈತನ್ಯ ಸಂಸ್ಥೆ, ನವಚೇತನ ಸಂಸ್ಥೆ, ಎನ್ಎಸ್ಎಸ್ ಘಟಕಗಳು ಹಾಗೂ ರೆಡ್ ರಿಬ್ಬನ್ ಕ್ಲಬ್ಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಡಾ. ಈ.ಎಸ್. ಪಲ್ಲೇದ, ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ಡಾ. ಆರ್.ಎನ್. ಗೋಡಬೋಲೆ, ಜಿಲ್ಲೆಯ ವಿವಿಧ ಐಸಿಟಿಸಿ ಹಾಗೂ ಎಆರ್ಟಿ ಕೇಂದ್ರಗಳ ಸಿಬ್ಬಂದಿ, ಡ್ಯಾಪ್ಕೂ ಸಿಬ್ಬಂದಿ, ಆರೋಗ್ಯ ಮತ್ತು ಶಿಕ್ಷಣ ಇಲಾಖೆಯ ಸಿಬ್ಬಂದಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ರಕ್ಷಣೆ ಸಂಸ್ಥೆಯ ಹಜರತ್ ಬಿ. ಹಾಗೂ ಸಿಬ್ಬಂದಿ, ಸೃಷ್ಟಿ ಸಂಕುಲದ ಆದಿತ್ಯ, ಚೈತನ್ಯ ಸಂಸ್ಥೆಯ ನಾಗರಾಜ ಹಾಗೂ ಸಿಬ್ಬಂದಿ, ನವಚೇತನ ಸಂಸ್ಥೆಯ ಸವಿತಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande