
ಬೆಂಗಳೂರು, 28 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ರಾಜ್ಯ ಸರ್ಕಾರದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮೂರು ತಂಡಗಳು ಕರ್ನಾಟಕಕ್ಕೆ ಆಗಮಿಸಿ ಬರ ಪರಿಸ್ಥಿತಿಯ ಕುರಿತು ಅಧ್ಯಯನ ನಡೆಸಲಿವೆ. ತುಮಕೂರು, ಚಿತ್ರದುರ್ಗ, ದಾವಣಗೆರೆ ಭಾಗದಲ್ಲಿ ಒಂದು ತಂಡ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮತ್ತೊಂದು ತಂಡ ಹಾಗೂ ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ಮೈಸೂರು ಭಾಗದಲ್ಲಿ ಮೂರನೇ ತಂಡ ಅಧ್ಯಯನ ನಡೆಸಲಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಸದಾಶಿವನಗರದ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರದ ತಂಡಗಳು ಬರಪೀಡಿತ ಪ್ರದೇಶಗಳಲ್ಲಿ ಅಧ್ಯಯನ ನಡೆಸಿ ತಮ್ಮ ವರದಿಯನ್ನು ಸಲ್ಲಿಸಲಿವೆ. ರಾಜ್ಯ ಸರ್ಕಾರ ಈಗಾಗಲೇ ಕೇಂದ್ರಕ್ಕೆ ಲಿಖಿತ ದಾಖಲೆ ಸಲ್ಲಿಸಿದ್ದು, ಅದರ ಆಧಾರದ ಮೇಲೆಯೇ ಕೇಂದ್ರದ ತಂಡಗಳು ಪರಿಶೀಲನೆ ನಡೆಸಲಿವೆ. ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮತ್ತೊಂದು ಮೆಮೊರಾಂಡಂ ಕೂಡ ಸಲ್ಲಿಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಬರ ಎಂದು ಘೋಷಿಸಲಾಗಿರುವ ಎಲ್ಲ ತಾಲೂಕುಗಳ ಬಗ್ಗೆಯೂ ಕೇಂದ್ರದ ತಂಡಗಳು ಮಾಹಿತಿಯನ್ನು ಸಂಗ್ರಹಿಸುವ ಸಾಧ್ಯತೆಯಿದೆ. ಕೆಲವು ತಾಲೂಕುಗಳಿಗೆ ತಂಡಗಳು ಖುದ್ದಾಗಿ ಭೇಟಿ ನೀಡಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಳ್ಳಲಿವೆ. ರಾಜ್ಯ ಸರ್ಕಾರ ಸಲ್ಲಿಸಿರುವ ವರದಿಯಲ್ಲಿನ ಅಂಶಗಳು ಹಾಗೂ ಕೇಂದ್ರದ ತಂಡಗಳು ಸ್ಥಳದಲ್ಲೇ ನಡೆಸುವ ಪರಿಶೀಲನೆಯಲ್ಲಿನ ವಾಸ್ತವಾಂಶಗಳ ನಡುವೆ ಯಾವುದೇ ವ್ಯತ್ಯಾಸವಿದೆಯೇ ಎಂಬುದನ್ನೂ ಅವರು ಪರಿಶೀಲಿಸಲಿದ್ದಾರೆ ಎಂದು ಡಾ.ಜಿ.ಪರಮೇಶ್ವರ ವಿವರಿಸಿದರು.
ರಾಜ್ಯದ ಬರ ಪೀಡಿತ ತಾಲೂಕುಗಳ ಘೋಷಣೆ ಕೇಂದ್ರದ ಮಾರ್ಗಸೂಚಿ ಆಧಾರಿತ :
ಕೇಂದ್ರದ ಮಾರ್ಗಸೂಚಿಗಳ ಪ್ರಕಾರವೇ ಗ್ರೌಂಡ್ ಟ್ರೂಥಿಂಗ್ ನಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ತಂಡಗಳಿಗೆ ತಮ್ಮದೇ ಆದ ಮಾರ್ಗಸೂಚಿಗಳಿವೆ. ರಾಜ್ಯ ಸರ್ಕಾರವೂ ಬರ ತಾಲೂಕುಗಳನ್ನು ಘೋಷಿಸುವ ಸಂದರ್ಭದಲ್ಲಿ ಇದೇ ಮಾರ್ಗಸೂಚಿಗಳನ್ನು ಅನುಸರಿಸಿದೆ ಎಂದು ಹೇಳಿದರು.
ಮಾರ್ಗಸೂಚಿಗಳಲ್ಲಿರುವ ಮಾನದಂಡಗಳನ್ನು ಆಧರಿಸಿಯೇ ಬರಪೀಡಿತ ತಾಲೂಕುಗಳನ್ನು ಘೋಷಿಸಲಾಗಿದೆ. ಮಾರ್ಗಸೂಚಿಗಳ ವ್ಯಾಪ್ತಿಗೆ ಬರದ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿಲ್ಲ. ಹೀಗಾಗಿ ಕೇಂದ್ರದ ತಂಡಗಳು ಪರಿಶೀಲನೆ ನಡೆಸಿದಾಗ ರಾಜ್ಯ ಸರ್ಕಾರದ ವರದಿ ಹಾಗೂ ಅವರ ಪರಿಶೀಲನೆಯ ನಡುವೆ ಹೆಚ್ಚಿನ ವ್ಯತ್ಯಾಸ ಕಂಡುಬರುವ ಸಾಧ್ಯತೆ ಇಲ್ಲ ಎಂದು ಅವರು ಹೇಳಿದರು.
ಅಕ್ಟೋಬರ್ ಮೊದಲ ವಾರದಲ್ಲಿ ಅಂತಿಮ ಲಿಖಿತ ದಾಖಲೆ :
ಸದ್ಯ ಇನ್ನಷ್ಟು ಗ್ರೌಂಡ್ ಟ್ರೂಥಿಂಗ್ ನಡೆಯುತ್ತಿದೆ. ಅದು ಪೂರ್ಣಗೊಂಡ ಬಳಿಕ ಅಂತಿಮ ಲಿಖಿತ ದಾಖಲೆ ಸಿದ್ಧಪಡಿಸಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಸೆಪ್ಟೆಂಬರ್ 30ಕ್ಕೆ ಮುಂಗಾರು ಅವಧಿ ಮುಕ್ತಾಯವಾಗಲಿದ್ದು, ಅದರ ನಂತರ ಅಕ್ಟೋಬರ್ ಮೊದಲ ವಾರದಲ್ಲೇ ಅಂತಿಮ ಲಿಖಿತ ದಾಖಲೆ ಸಲ್ಲಿಸಲು ಉದ್ದೇಶಿಸಲಾಗಿದೆ. ರಾಜ್ಯದ ನಷ್ಟ ಹಾಗೂ ಅಗತ್ಯವಿರುವ ಪರಿಹಾರದ ಕುರಿತು ಸಮಗ್ರ ಮಾಹಿತಿಯನ್ನು ಒಳಗೊಂಡ ವರದಿಯನ್ನು ಕೇಂದ್ರದ ಮುಂದೆ ಮಂಡಿಸಲಾಗುವುದು ಎಂದು ಹೇಳಿದರು.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ :
ಬರ ಪರಿಹಾರದ ವಿಚಾರದಲ್ಲಿ ಸರ್ವಪಕ್ಷ ನಿಯೋಗದ ಅಗತ್ಯವನ್ನು ಪುನರುಚ್ಚರಿಸಿದ ಡಾ.ಜಿ.ಪರಮೇಶ್ವರ ಅವರು, ಬರ ಯಾವುದೇ ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಲ್ಲ. ಪ್ರಕೃತಿ ವಿಕೋಪಕ್ಕೆ ಪಕ್ಷದ ಬೇಧವಿಲ್ಲ. ಕೇಂದ್ರ ಸರ್ಕಾರದ ಮುಂದೆ ಎಲ್ಲರೂ ಒಟ್ಟಾಗಿ ರಾಜ್ಯದ ಪರವಾಗಿ ಮನವಿ ಸಲ್ಲಿಸಿದರೆ ಹೆಚ್ಚಿನ ನೆರವು ಪಡೆಯಲು ಅನುಕೂಲವಾಗಲಿದೆ ಎಂಬ ಉದ್ದೇಶದಿಂದಲೇ ಮುಖ್ಯಮಂತ್ರಿ ಸರ್ವಪಕ್ಷ ನಿಯೋಗ ಕರೆದೊಯ್ಯುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ನಾಯಕರು ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಅವರು ನಮ್ಮೊಂದಿಗೆ ಬಂದರೆ ಕೇಂದ್ರ ಸರ್ಕಾರವನ್ನು ಮನವರಿಕೆ ಮಾಡಿಕೊಡಲು ಇನ್ನಷ್ಟು ಸಹಕಾರಿಯಾಗುತ್ತದೆ ಎಂಬುದು ರಾಜ್ಯ ಸರ್ಕಾರದ ಉದ್ದೇಶ. ಆದರೆ, ಅವರು ಬರದಿದ್ದರೂ ಆಡಳಿತ ಪಕ್ಷವಾಗಿ ರಾಜ್ಯದ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ಗಮನಕ್ಕೆ ವಿಷಯವನ್ನು ತರುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನಿರ್ವಹಿಸಲಿದೆ ಎಂದು ಹೇಳಿದರು.
ಬರ ಯಾವುದೇ ಪಕ್ಷದ ಸಮಸ್ಯೆಯಲ್ಲ. ಇದು ಕರ್ನಾಟಕದ ಜನರ ಹಿತಾಸಕ್ತಿಗೆ ಸಂಬಂಧಿಸಿದ ವಿಷಯ. ಆದ್ದರಿಂದ ಎಲ್ಲರೂ ತಮ್ಮ ಜವಾಬ್ದಾರಿಯನ್ನು ಹಂಚಿಕೊಳ್ಳಬೇಕು. ಕೇಂದ್ರಕ್ಕೆ ಮನವಿ ಸಲ್ಲಿಸುವ ಸಂದರ್ಭದಲ್ಲಿ ಬಿಜೆಪಿಯವರೂ ನಮ್ಮೊಂದಿಗೆ ಬರಬೇಕು ಎಂದು ಮತ್ತೊಮ್ಮೆ ಮನವಿ ಮಾಡುವುದಾಗಿ ಅವರು ಹೇಳಿದರು.
ಕೇಂದ್ರ ಸರ್ಕಾರ ಮತ್ತೊಮ್ಮೆ ಪರಿಹಾರಕ್ಕಾಗಿ ಮನವಿ ಸಲ್ಲಿಸಿದರೂ ಸ್ಪಂದಿಸದ ಪರಿಸ್ಥಿತಿ ಎದುರಾದರೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಡಾ.ಜಿ.ಪರಮೇಶ್ವರ ಹೇಳಿದರು.
ಕೇಂದ್ರ ಸರ್ಕಾರ ಪರಿಹಾರ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದರೆ, ಕಳೆದ ವರ್ಷ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರೀತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಬಾರದು. ಕೇಂದ್ರ ಸರ್ಕಾರ ಹಾಗೂ ಸಂಬಂಧಪಟ್ಟವರು ಅಂತಹ ಅವಕಾಶವನ್ನು ನೀಡಬಾರದು ಎಂಬುದು ತಮ್ಮ ಮನವಿ ಎಂದು ಅವರು ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.