ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರಾಟ: ವಿಲ್ಸನ್ ಗಾರ್ಡನ್ ಪೊಲೀಸರಿಂದ ಮೂವರ ಬಂಧನ
ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್ಸಿ), ಬ್ಯಾಂಕ್ಗಳ ನಿರಾಕ್ಷೇಪಣಾ ಪತ್ರ (ಎನ್ಒಸಿ) ಹಾಗೂ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ನಕಲಿ ಮುದ್ರೆಗಳನ್ನು ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಮೂವರನ್ನು
ನಕಲಿ ದಾಖಲೆ ಸೃಷ್ಟಿಸಿ ಕಾರು ಮಾರಾಟ: ವಿಲ್ಸನ್ ಗಾರ್ಡನ್ ಪೊಲೀಸರಿಂದ ಮೂವರ ಬಂಧನ


ಬೆಂಗಳೂರು, 24 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ವಾಹನಗಳ ನೋಂದಣಿ ಪ್ರಮಾಣಪತ್ರ (ಆರ್ಸಿ), ಬ್ಯಾಂಕ್ಗಳ ನಿರಾಕ್ಷೇಪಣಾ ಪತ್ರ (ಎನ್ಒಸಿ) ಹಾಗೂ ಸರ್ಕಾರಿ ಕಚೇರಿ ಮತ್ತು ಅಧಿಕಾರಿಗಳ ನಕಲಿ ಮುದ್ರೆಗಳನ್ನು ಸೃಷ್ಟಿಸಿ ಕಾರುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವಿಲ್ಸನ್ ಗಾರ್ಡನ್ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ಕೆಂಗೇರಿಯ ಎನ್. ಸೋಮೇಶ್ (46), ಜ್ಞಾನಭಾರತಿ ನಿವಾಸಿ ಎಸ್. ಸಂತೋಷ್ ಅಲಿಯಾಸ್ ಅಪ್ಪು (37) ಹಾಗೂ ಸೋಲದೇವನಹಳ್ಳಿ ನಿವಾಸಿ ಸಿ. ಪ್ರಭಾಕರ್ (43) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಸುಮಾರು ₹2 ಕೋಟಿ ಮೌಲ್ಯದ 10 ಕಾರುಗಳು ಹಾಗೂ ಒಂದು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣವು ಸೆಪ್ಟೆಂಬರ್ 3ರಂದು ಮೆಹಬೂಬ್ ಲೇಔಟ್ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಬೆಳಕಿಗೆ ಬಂದಿದೆ. ಕಾರು ಡೀಲರ್ ಆಗಿರುವ ಪ್ರಭಾಕರ್, ಟೊಯೊಟಾ ಫಾರ್ಚುನರ್ ಕಾರಿನ ಫೋಟೊಗಳನ್ನು ವಾಟ್ಸ್ಆ್ಯಪ್ ಮೂಲಕ ಕಳುಹಿಸಿ ಮಾರಾಟಕ್ಕೆ ಮುಂದಾಗಿದ್ದ.

ಕಾರು ಖರೀದಿಗೆ ₹20 ಸಾವಿರ ಮುಂಗಡ ಪಾವತಿಸಿದ ಬಳಿಕ ವಿಲ್ಸನ್ ಗಾರ್ಡನ್ ಪಾರ್ಕ್ ಬಳಿ ಕಾರು ಹಾಗೂ ಆರ್ಸಿ ನೀಡಲಾಗಿತ್ತು. ಆದರೆ ದಾಖಲೆ ಪರಿಶೀಲಿಸಿದಾಗ ಆರ್ಸಿ ನಕಲಿ ಎಂಬುದು ಪತ್ತೆಯಾಗಿದೆ.

ತನಿಖೆ ನಡೆಸಿದ ಪೊಲೀಸರು ಆರೋಪಿಗಳಿಂದ ನಕಲಿ ಆರ್ಸಿ ತಯಾರಿಸುವ ಯಂತ್ರ, ಬ್ಯಾಂಕ್ ಎನ್ಒಸಿ, ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳ ಮುದ್ರೆಗಳು, ಇ-ಸ್ಟಾಂಪ್ ಪೇಪರ್ಗಳು, ಕಂಪ್ಯೂಟರ್ ಮತ್ತು ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ನಕಲಿ ದಾಖಲೆಗಳು ಮತ್ತು ನಂಬರ್ಪ್ಲೇಟ್ಗಳ ಬಳಕೆಯಿಂದ ವಾಹನಗಳ ನೈಜ ಗುರುತು ಪತ್ತೆಹಚ್ಚಲು ಹಾಗೂ ಅಪರಾಧ ಪ್ರಕರಣಗಳ ತನಿಖೆಗೆ ತೊಂದರೆಯಾಗುವ ಸಾಧ್ಯತೆಯಿದೆ.

ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯೊಂದಿಗೆ ಚರ್ಚಿಸಿ ದಾಖಲೆಗಳು ಮತ್ತು ನಂಬರ್ಪ್ಲೇಟ್ಗಳಲ್ಲಿ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳನ್ನು ಅಳವಡಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಪ್ರಕರಣದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande