ಶಿಶುಗಳ ಆರೈಕೆಯಲ್ಲಿ ವೈದ್ಯರ ಸಲಹೆಯೇ ಮುಖ್ಯ
ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮನೆಮದ್ದುಗಳು, ಆರೈಕೆ ವಿಧಾನಗಳು ಹಾಗೂ ಮಕ್ಕಳಿಗಾಗಿ ಎಂದು ಪ್ರಚಾರಗೊಳ್ಳುವ ಉತ್ಪನ್ನಗಳನ್ನು ಪರಿಶೀಲನೆ ಇಲ್ಲದೆ ಶಿಶುಗಳ ಮೇಲೆ ಪ್ರಯೋಗಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ತಜ್ಞರು
infant-care-doctors-advice-more-important-than-viral-trends-experts-warn


ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮನೆಮದ್ದುಗಳು, ಆರೈಕೆ ವಿಧಾನಗಳು ಹಾಗೂ ಮಕ್ಕಳಿಗಾಗಿ ಎಂದು ಪ್ರಚಾರಗೊಳ್ಳುವ ಉತ್ಪನ್ನಗಳನ್ನು ಪರಿಶೀಲನೆ ಇಲ್ಲದೆ ಶಿಶುಗಳ ಮೇಲೆ ಪ್ರಯೋಗಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಶಿಶುಗಳ ಆರೈಕೆಯಲ್ಲಿ ವೈರಲ್ ಟ್ರೆಂಡ್ಗಳಿಗಿಂತ ವೈದ್ಯರ ಸಲಹೆ ಮತ್ತು ವೈಜ್ಞಾನಿಕವಾಗಿ ದೃಢಪಟ್ಟ ಮಾಹಿತಿಗೆ ಪೋಷಕರು ಆದ್ಯತೆ ನೀಡಬೇಕು ಎಂದು ಅವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಡೆದ ‘ಟ್ರಸ್ಟ್ ಬಿಫೋರ್ ಟ್ರೆಂಡ್ಸ್’ ಸಂವಾದದಲ್ಲಿ ಮಕ್ಕಳ ತಜ್ಞರು, ಚರ್ಮರೋಗ ತಜ್ಞರು ಹಾಗೂ ಪೋಷಕರಿಗಾಗಿ ವಿಷಯ ಹಂಚಿಕೊಳ್ಳುವ ಕ್ರಿಯೇಟರ್ಗಳು ಭಾಗವಹಿಸಿ, ಶಿಶುಗಳ ತ್ವಚೆ ಮತ್ತು ಉತ್ಪನ್ನಗಳ ಸುರಕ್ಷತೆ ಕುರಿತು ಚರ್ಚಿಸಿದರು.

ಆಕರ್ಷಕ ಜಾಹೀರಾತುಗಳಿಗೆ ಮರುಳಾಗದಿರಿ: ‘ಚರ್ಮರೋಗ ತಜ್ಞರಿಂದ ಪರೀಕ್ಷಿತ’ ಅಥವಾ ‘ಮಕ್ಕಳ ತಜ್ಞರಿಂದ ಶಿಫಾರಸು’ ಎಂಬ ಪ್ಯಾಕೆಟ್ ಮೇಲಿನ ಹೇಳಿಕೆಗಳನ್ನು ಮಾತ್ರ ನಂಬದೆ, ಉತ್ಪನ್ನದಲ್ಲಿರುವ ಘಟಕಗಳ ಪಟ್ಟಿಯನ್ನು ಪರಿಶೀಲಿಸಬೇಕು ಎಂದು ಮಕ್ಕಳ ತಜ್ಞ ಹಾಗೂ ನಿಯೋನಾಟಾಲಜಿಸ್ಟ್ ಡಾ. ಸೈಯದ್ ಮುಜಾಹಿದ್ ಸಲಹೆ ನೀಡಿದ್ದಾರೆ.

ವಿಶೇಷವಾಗಿ ಸುಗಂಧ ದ್ರವ್ಯ, ಸಲ್ಫೇಟ್ ಸೇರಿದಂತೆ ವಿವಿಧ ಘಟಕಗಳ ಬಗ್ಗೆ ಗಮನಹರಿಸಿ, ಅಗತ್ಯವಿದ್ದರೆ ವೈದ್ಯರ ಸಲಹೆ ಪಡೆಯಬೇಕು ಎಂದಿದ್ದಾರೆ.

ಸರಳ ಆರೈಕೆಗೆ ಆದ್ಯತೆ: ಮಕ್ಕಳ ತ್ವಚೆಗೆ ವಯಸ್ಕರ ಮಾದರಿಯ ಹಲವು ಹಂತಗಳ ಸೌಂದರ್ಯ ಆರೈಕೆ ಅಗತ್ಯವಿಲ್ಲ.

ಸರಳವಾದ ಆರೈಕೆಯೇ ಸೂಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯವಾಗಿರುವ ಪ್ರತಿಯೊಂದು ವಿಧಾನವನ್ನೂ ಶಿಶುಗಳ ಮೇಲೆ ಪ್ರಯೋಗಿಸಬಾರದು ಎಂದು ಚರ್ಮರೋಗ ತಜ್ಞೆ ಡಾ. ರಮ್ಯಾ ನಾಗರಾಜ್ ಹೇಳಿದ್ದಾರೆ.

ಶಿಶುಗಳ ತ್ವಚೆ ಸೂಕ್ಷ್ಮವಾಗಿರುವುದರಿಂದ ಬಳಸುವ ಉತ್ಪನ್ನಗಳು ಸುರಕ್ಷಿತವಾಗಿದ್ದು, ನವಜಾತ ಶಿಶುಗಳಿಗೆ ಸೂಕ್ತವಾಗಿ ರೂಪುಗೊಂಡಿರುವುದು ಅಗತ್ಯ.

ಉತ್ಪನ್ನದ ಸಂಪೂರ್ಣ ಘಟಕಗಳ ವಿವರ ಮತ್ತು ಸುರಕ್ಷತೆಯ ಬಗ್ಗೆ ಪಾರದರ್ಶಕತೆ ಇರಬೇಕು ಎಂಬುದನ್ನು ತಜ್ಞರ ಶಿಫಾರಸುಗಳೂ ಒತ್ತಿಹೇಳುತ್ತವೆ.

“ಪೋಷಕರಿಗೆ ಇಂದು ಮಾಹಿತಿಯ ಕೊರತೆಯಿಲ್ಲ; ಆದರೆ ವಿಶ್ವಾಸಾರ್ಹ ಮಾಹಿತಿಯನ್ನು ಗುರುತಿಸುವಲ್ಲಿ ಗೊಂದಲವಿದೆ. ಆ ಗೊಂದಲ ನಿವಾರಿಸುವುದು ಅಗತ್ಯ,” ಎಂದು ಮಾಮ್ಜಂಕ್ಷನ್ ಉಪಾಧ್ಯಕ್ಷೆ ನತಾಶಾ ಗರ್ಯಾಲಿ ಹೇಳಿದ್ದಾರೆ.

ತಜ್ಞರ ಪ್ರಕಾರ, ಸಾಮಾಜಿಕ ಜಾಲತಾಣದ ಮಾಹಿತಿಯನ್ನು ಸಾಮಾನ್ಯ ಅರಿವಿಗಾಗಿ ಬಳಸಬಹುದಾದರೂ, ಅದು ವೈಯಕ್ತಿಕ ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಗೆ ಪರ್ಯಾಯವಾಗಬಾರದು.

ಶಿಶುಗಳ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಅನುಮಾನ ಅಥವಾ ಸಮಸ್ಯೆ ಕಂಡುಬಂದಲ್ಲಿ ಅರ್ಹ ಮಕ್ಕಳ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande