ಬೆಂಗಳೂರಿನಲ್ಲಿ 3 ದಿನದಲ್ಲಿ ₹29.75 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಜಪ್ತಿ
3 ದಿನದಲ್ಲಿ ₹29.75 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಜಪ್ತಿ
ಬೆಂಗಳೂರಿನಲ್ಲಿ 3 ದಿನದಲ್ಲಿ ₹29.75 ಕೋಟಿ ಮೌಲ್ಯದ ಡ್ರಗ್ಸ್, ಚಿನ್ನ ಜಪ್ತಿ


ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ಒಟ್ಟು ₹29.75 ಕೋಟಿ ಮೌಲ್ಯದ ಹೈಡ್ರೋಪೊನಿಕ್ ಗಾಂಜಾ ಹಾಗೂ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಬಂಧಿಸಿ, ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೆ.19 ಹಾಗೂ 21ರಂದು ನಡೆದ ಕಾರ್ಯಾಚರಣೆಯಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಮತ್ತು ಚಿನ್ನ ಪತ್ತೆಯಾಗಿದೆ. ಸೆ.21ರಂದು ವಿಯೆಟ್ನಾಂನಿಂದ ಬಂದ ಪ್ರಯಾಣಿಕನ ಕ್ಯಾಬಿನ್ ಬ್ಯಾಗ್ನಲ್ಲಿ ₹70 ಲಕ್ಷ ಮೌಲ್ಯದ 2 ಕೆ.ಜಿ. ಹೈಡ್ರೋಪೊನಿಕ್ ಗಾಂಜಾ ಪತ್ತೆಯಾಗಿದೆ.

ಅದೇ ದಿನ ಕೌಲಾಲಂಪುರದಿಂದ ಬಂದ ಪ್ರಯಾಣಿಕನೊಬ್ಬ ₹81.47 ಲಕ್ಷ ಮೌಲ್ಯದ 559.4 ಗ್ರಾಂ ಚಿನ್ನವನ್ನು ಬ್ಯಾಗ್, ಒಳ ಉಡುಪು ಹಾಗೂ ದೇಹದಲ್ಲಿ ಅಡಗಿಸಿಕೊಂಡು ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ.

ಸೆ.19ರಂದು ಬ್ಯಾಂಕಾಕ್ನಿಂದ ಬಂದ ಪ್ರಯಾಣಿಕನಿಂದ ₹5.35 ಕೋಟಿ ಮೌಲ್ಯದ 15.3 ಕೆ.ಜಿ. ಹೈಡ್ರೋಪೊನಿಕ್ ಗಾಂಜಾ ಜಪ್ತಿ ಮಾಡಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಬ್ಯಾಂಕಾಕ್ನಿಂದ ಬಂದ ಇಬ್ಬರು ಪ್ರಯಾಣಿಕರಿಂದ ₹9.38 ಕೋಟಿ ಮೌಲ್ಯದ 26.8 ಕೆ.ಜಿ. ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇದೇ ವೇಳೆ, ಬ್ಯಾಂಕಾಕ್ನಿಂದ ಬಂದ ಮತ್ತಿಬ್ಬರು ಪ್ರಯಾಣಿಕರಿಂದ ₹12.57 ಕೋಟಿ ಮೌಲ್ಯದ 36 ಕೆ.ಜಿ. ಹೈಡ್ರೋಪೊನಿಕ್ ಗಾಂಜಾ ಹಾಗೂ ಅಬುಧಾಬಿಯಿಂದ ಬಂದ ಪ್ರಯಾಣಿಕನಿಂದ ₹93.78 ಲಕ್ಷ ಮೌಲ್ಯದ 642 ಗ್ರಾಂ ಚಿನ್ನದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆ ಕಾರ್ಯಾಚರಣೆಯಲ್ಲಿ 80.1 ಕೆ.ಜಿ. ಗಾಂಜಾ ಹಾಗೂ 1.20 ಕೆ.ಜಿ. ಚಿನ್ನ ಜಪ್ತಿಯಾಗಿದೆ.

ವಿದೇಶಗಳಿಂದ ಮಾದಕ ವಸ್ತು ಹಾಗೂ ಚಿನ್ನವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಕಸ್ಟಮ್ಸ್ ಇಲಾಖೆ ಪ್ರಕಟಣೆ ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande