
ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿದಿದ್ದು, ಸೆಪ್ಟೆಂಬರ್ 23 ಮತ್ತು 24ರಂದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ. ಮಳೆಯೊಂದಿಗೆ ಗಂಟೆಗೆ 30ರಿಂದ 40 ಕಿ.ಮೀ. ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯೂ ಇದೆ ಎಂದು ತಿಳಿಸಿದೆ.
ಸೆ.24ರಂದು ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಬೀದರ್ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸೆ.23ರಂದು ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ಹಾವೇರಿ, ಯಾದಗಿರಿ, ಧಾರವಾಡ, ರಾಯಚೂರು, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ಸೆ.24ರಂದು ಬೆಳಗಾವಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿಗೆ ಆರೆಂಜ್ ಅಲರ್ಟ್: ಸೆ.23ರಂದು ಬಳ್ಳಾರಿ, ವಿಜಯನಗರ, ಚಿಕ್ಕಬಳ್ಳಾಪುರ ಮತ್ತು ತುಮಕೂರು ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕಡೆ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.
ಸೆ.24ರಂದು ಚಿಕ್ಕಮಗಳೂರು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಚಿತ್ರದುರ್ಗ, ಬಳ್ಳಾರಿ, ವಿಜಯನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ದಾವಣಗೆರೆ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
8 ಸೆಂ.ಮೀ. ಮಳೆ ದಾಖಲು: ಐಎಂಡಿ ಮಾಹಿತಿ ಪ್ರಕಾರ, ಮಂಗಳವಾರ ಸಂಜೆ ಕೊನೆಗೊಂಡ 24 ಗಂಟೆ ಅವಧಿಯಲ್ಲಿ ಒಳನಾಡು ಕರ್ನಾಟಕದಲ್ಲಿ ಮುಂಗಾರು ಸಾಮಾನ್ಯವಾಗಿದ್ದರೆ, ಕರಾವಳಿ ಕರ್ನಾಟಕದಲ್ಲಿ ದುರ್ಬಲವಾಗಿತ್ತು. ಕಲಬುರಗಿ ಜಿಲ್ಲೆಯ ಯಡ್ರಾಮಿಯಲ್ಲಿ 8 ಸೆಂ.ಮೀ., ಬೆಂಗಳೂರು ನಗರದ ಹೆಸರಘಟ್ಟದಲ್ಲಿ 6 ಸೆಂ.ಮೀ., ವಿಜಯಪುರ ಜಿಲ್ಲೆಯ ಇಂಡಿಯಲ್ಲಿ 6 ಸೆಂ.ಮೀ. ಹಾಗೂ ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ 5 ಸೆಂ.ಮೀ. ಮಳೆ ದಾಖಲಾಗಿದೆ.
ಐಎಂಡಿ ಮುನ್ಸೂಚನೆ: ಸೆ.23 ಮತ್ತು 24ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇರುವುದರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R