
ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ವಿಮಾ ಕಂಪನಿಗಳಿಗೆ ಸಲ್ಲಿಕೆಯಾಗುವ ವಂಚನೆಪೂರಿತ ಹಾಗೂ ನಕಲಿ ಕ್ಲೇಮ್ಗಳ ತನಿಖೆ ನಡೆಸಲು ರಾಜ್ಯ ಸರ್ಕಾರ ರಾಜ್ಯಮಟ್ಟದ ವಿಶೇಷ ತನಿಖಾ ತಂಡವನ್ನು ರಚಿಸಿದೆ.
ವಿಮಾ ವಂಚನೆ ಪ್ರಕರಣಗಳ ಕುರಿತು ದೇಶದಾದ್ಯಂತ ರಾಜ್ಯಮಟ್ಟದಲ್ಲಿ ಎಸ್ಐಟಿ ರಚಿಸುವಂತೆ ಸುಪ್ರೀಂ ಕೋರ್ಟ್ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಕ್ರಮ ಕೈಗೊಂಡಿದೆ.
ಸೆಪ್ಟೆಂಬರ್ 22ರಂದು ಗೃಹ ಇಲಾಖೆ ಹೊರಡಿಸಿರುವ ಆದೇಶದಂತೆ, ಪೊಲೀಸ್ ಮಹಾನಿರೀಕ್ಷಕರ ಹುದ್ದೆಯ ಅಧಿಕಾರಿಯನ್ನು ಎಸ್ಐಟಿ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ಸಿಐಡಿಯಿಂದ ನಾಮನಿರ್ದೇಶನಗೊಳ್ಳುವ ಪೊಲೀಸ್ ಅಧೀಕ್ಷಕರು , ಒಬ್ಬ ಡಿವೈಎಸ್ಪಿ ಹಾಗೂ ಮೂವರು ಪೊಲೀಸ್ ಇನ್ಸ್ಪೆಕ್ಟರ್ಗಳು ತಂಡದ ಸದಸ್ಯರಾಗಿರಲಿದ್ದಾರೆ.
ರಾಜ್ಯಾದ್ಯಂತ ವ್ಯಾಪ್ತಿ ಹೊಂದಿರುವ ಎಸ್ಐಟಿಯನ್ನು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ, 2023ರ ಸೆಕ್ಷನ್ 2(1)(u) ಅಡಿಯಲ್ಲಿ ಪೊಲೀಸ್ ಠಾಣೆ ಎಂದು ಘೋಷಿಸಲಾಗಿದೆ.
ತನಿಖೆ ಪೂರ್ಣಗೊಂಡ ಬಳಿಕ BNSS ಸೆಕ್ಷನ್ 193ರಡಿ ಸಂಬಂಧಪಟ್ಟ ನ್ಯಾಯಾಲಯಗಳಿಗೆ ಅಂತಿಮ ವರದಿ ಸಲ್ಲಿಸುವ ಅಧಿಕಾರವನ್ನೂ ತಂಡಕ್ಕೆ ನೀಡಲಾಗಿದೆ.
ವಿಮಾ ಕಂಪನಿಗಳಿಂದ ಸ್ವೀಕರಿಸಲಾಗುವ ವಂಚನೆ ಶಂಕಿತ ಕ್ಲೇಮ್ಗಳಿಗೆ ಸಂಬಂಧಿಸಿದ ದೂರುಗಳನ್ನು ಎಸ್ಐಟಿಗೆ ವರ್ಗಾಯಿಸಲಾಗುತ್ತದೆ.
ಅಂತಹ ಎಲ್ಲ ಪ್ರಕರಣಗಳನ್ನೂ ಸಮಗ್ರವಾಗಿ ತನಿಖೆ ನಡೆಸಿ, ಪ್ರಗತಿಯ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ಎಸ್ಐಟಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು (ಕಾನೂನು ಮತ್ತು ಸುವ್ಯವಸ್ಥೆ) ಅವರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ.
“ವಿಮಾ ಕಂಪನಿಗಳಿಂದ ಸ್ವೀಕರಿಸುವ ಎಲ್ಲ ವಂಚನೆ ದೂರುಗಳನ್ನು ಎಸ್ಐಟಿ ಸಮಗ್ರವಾಗಿ ತನಿಖೆ ನಡೆಸಬೇಕು.
ತನಿಖೆ ಪೂರ್ಣಗೊಂಡ ನಂತರ ಯಾವುದೇ ವಿಳಂಬವಿಲ್ಲದೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಹಾಗೂ ಪ್ರಕರಣಗಳ ಪ್ರಗತಿಯ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸುಪ್ರೀಂ ಕೋರ್ಟ್ ಇತ್ತೀಚೆಗೆ ವಂಚನೆ ಶಂಕಿತ ಮೋಟಾರು ಅಪಘಾತ ವಿಮಾ ಕ್ಲೇಮ್ಗಳ ತನಿಖೆಗೆ ಪ್ರತಿಯೊಂದು ರಾಜ್ಯದಲ್ಲೂ ಪ್ರತ್ಯೇಕ ಎಸ್ಐಟಿ ರಚಿಸುವಂತೆ ನಿರ್ದೇಶಿಸಿತ್ತು.
ವಿಮಾ ಕಂಪನಿಗಳು ವಂಚನೆ ಶಂಕೆ ಇರುವ ಎಲ್ಲ ಕ್ಲೇಮ್ಗಳನ್ನು ಎಸ್ಐಟಿಗೆ ಕಳುಹಿಸಬೇಕು ಮತ್ತು ಆಯ್ದ ಪ್ರಕರಣಗಳನ್ನು ಮಾತ್ರ ಉಲ್ಲೇಖಿಸುವ ಕ್ರಮ ಅನುಸರಿಸಬಾರದು ಎಂದು ನ್ಯಾಯಾಲಯ ಸೂಚಿಸಿತ್ತು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R