ಮಳೆಯಿಂದ ಈರುಳ್ಳಿ ಬೆಳೆ ಜಲಾವೃತ; ಸಂಕಷ್ಟಕ್ಕೆ ಸಿಲುಕಿದ ರೈತರು
ಬಾಗಲಕೋಟೆ, 23 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಮಂಗಳವಾರ ಮಧ್ಯರಾತ್ರಿ ಇಂದ ಸುರಿಸುತ್ತಿರುವ ಧಾರಾಕಾರ ಮಳೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಲ್ಲಿ ನೀರು ನಿಂತುಕೊಂಡಿದ್ದು, ಈರುಳ್ಳಿ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಗಲ
ಈರುಳ್ಳಿ


ಬಾಗಲಕೋಟೆ, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಮಂಗಳವಾರ ಮಧ್ಯರಾತ್ರಿ ಇಂದ ಸುರಿಸುತ್ತಿರುವ ಧಾರಾಕಾರ ಮಳೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಹಲಗಲಿ ಸೇರಿದಂತೆ ವಿವಿಧ ಗ್ರಾಮಗಳ ಕೃಷಿ ಪ್ರದೇಶಗಳಲ್ಲಿ ನೀರು ನಿಂತುಕೊಂಡಿದ್ದು, ಈರುಳ್ಳಿ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನಲ್ಲಿ ಮಂಗಳವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಯಿಂದ ಹಲಗಲಿ ಗ್ರಾಮದ ವಿವಿಧ ಜಮೀನುಗಳಲ್ಲಿ ಮಳೆ ನೀರು ಸಂಗ್ರಹಗೊಂಡಿದೆ. ವಿಶೇಷವಾಗಿ ಈರುಳ್ಳಿ ಬೆಳೆದಿರುವ ಜಮೀನುಗಳಲ್ಲಿ ನೀರು ನಿಂತಿರುವ ಪರಿಣಾಮ ಬೆಳೆ ಹಾನಿಯಾಗುವ ಆತಂಕ ರೈತರನ್ನು ಕಾಡುತ್ತಿದೆ.

ಈಗಾಗಲೇ ಬರಗಾಲದ ಪರಿಣಾಮ ಕೃಷಿ ಚಟುವಟಿಕೆಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಬೆಳೆ ಬೆಳೆಯಲು ರೈತರು ಸಾಕಷ್ಟು ಹಣ ಹಾಗೂ ಶ್ರಮ ವ್ಯಯಿಸಿದ್ದಾರೆ. ಇದೀಗ ಕೊಯ್ಲಿನ ಹಂತದಲ್ಲಿರುವ ಈರುಳ್ಳಿ ಬೆಳೆಗೆ ಮಳೆ ನೀರು ನುಗ್ಗಿರುವುದು ರೈತರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

ಹಲಗಲಿ ಗ್ರಾಮದ ರೈತ ಮಹದೇವಪ್ಪ ಜವಳಗಟ್ಟಿ ಮಾತನಾಡಿ, ಬರಗಾಲದಿಂದಾಗಿ ಈಗಾಗಲೇ ರೈತರು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಕಷ್ಟಪಟ್ಟು ಬೆಳೆದ ಈರುಳ್ಳಿ ಬೆಳೆಗೆ ಇದೀಗ ಅಕಾಲಿಕವಾಗಿ ಸುರಿದ ಭಾರಿ ಮಳೆಯಿಂದ ಜಮೀನಿನಲ್ಲಿ ನೀರು ನಿಂತಿದ್ದು, ಈರುಳ್ಳಿ ಕೊಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡರು.

ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ನಿಂತಿರುವುದರಿಂದ ಈರುಳ್ಳಿ ಗಡ್ಡೆಗಳು ಹಾನಿಗೊಳಗಾಗುವ ಸಾಧ್ಯತೆ ಇದೆ. ಮಳೆ ಮುಂದುವರಿದರೆ ಬೆಳೆ ಸಂಪೂರ್ಣವಾಗಿ ಹಾಳಾಗುವ ಆತಂಕವಿದ್ದು, ರೈತರು ಆರ್ಥಿಕ ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಹೇಳಿದರು.

ಬರದ ಸಂಕಷ್ಟದ ನಡುವೆಯೇ ಮಳೆಯ ಹೊಡೆತವೂ ರೈತರನ್ನು ಕಾಡುತ್ತಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬೆಳೆ ಹಾನಿಯನ್ನು ಪರಿಶೀಲಿಸಬೇಕು. ಹಾನಿಗೊಳಗಾದ ಈರುಳ್ಳಿ ಬೆಳೆಗಾರರಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.

ಒಟ್ಟಾರೆ, ಬರಗಾಲದಿಂದ ಸಂಕಷ್ಟಕ್ಕೊಳಗಾಗಿದ್ದ ಮುಧೋಳ ತಾಲೂಕಿನ ರೈತರಿಗೆ ಇದೀಗ ಸುರಿದ ಭಾರಿ ಮಳೆ ಮತ್ತೊಂದು ಆಘಾತ ನೀಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿ ನಿರ್ಮಾಣವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande