ಶಾಲಾ ಸಮಯದಲ್ಲಿ ಭಾರಿ ವಾಹನ ಸಂಚಾರ ನಿಷೇಧ
ಭಾರಿ ವಾಹನ ಸಂಚಾರ ನಿಷೇಧ
ಶಾಲಾ ಸಮಯದಲ್ಲಿ ಭಾರಿ ವಾಹನ ಸಂಚಾರ ನಿಷೇಧ


ಬೆಂಗಳೂರು, 23 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಪೂರ್ವ ಬೆಂಗಳೂರಿನ ವರ್ತೂರು–ಗುಂಜೂರು (ರಾಜ್ಯ ಹೆದ್ದಾರಿ–35) ಮಾರ್ಗದಲ್ಲಿ ಶಾಲಾ ಮಕ್ಕಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಭಾರಿ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ವೈಟ್ಫೀಲ್ಡ್ ಸಂಚಾರ ಪೊಲೀಸರು ಹೆಚ್ಚುವರಿ ನಿರ್ಬಂಧ ವಿಧಿಸಿದ್ದಾರೆ.

ಹೊಸ ವೇಳಾಪಟ್ಟಿಯಂತೆ ಬೆಳಿಗ್ಗೆ 7ರಿಂದ 11ರವರೆಗೆ, ಮಧ್ಯಾಹ್ನ 1ರಿಂದ 3ರವರೆಗೆ ಹಾಗೂ ಸಂಜೆ 4ರಿಂದ ರಾತ್ರಿ 9ರವರೆಗೆ ಭಾರಿ ಸರಕು ಸಾಗಣೆ ವಾಹನಗಳು ಮತ್ತು ಟ್ರಕ್ಗಳು ವರ್ತೂರು–ಗುಂಜೂರು ಮಾರ್ಗದಲ್ಲಿ ಸಂಚರಿಸುವುದನ್ನು ನಿಷೇಧಿಸಲಾಗಿದೆ.

ಈ ಹಿಂದೆ ಬೆಳಿಗ್ಗೆ 7ರಿಂದ 11ರವರೆಗೆ ಮಾತ್ರ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧವಿತ್ತು. ಆದರೆ ಈ ಮಾರ್ಗದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಶಾಲಾ ಸಮಯದಲ್ಲಿ ಉಂಟಾಗುತ್ತಿರುವ ಸಂಚಾರ ಸಮಸ್ಯೆ ಹಿನ್ನೆಲೆಯಲ್ಲಿ ನಿರ್ಬಂಧದ ಅವಧಿಯನ್ನು ವಿಸ್ತರಿಸಲಾಗಿದೆ.

ವರ್ತೂರು–ಗುಂಜೂರು ಮಾರ್ಗವು ಕಿರಿದಾದ ರಸ್ತೆಗಳು ಹಾಗೂ ಹಲವು ಟಿ-ಜಂಕ್ಷನ್ಗಳನ್ನು ಹೊಂದಿದ್ದು, ಭಾರಿ ವಾಹನಗಳ ನಿರಂತರ ಸಂಚಾರದಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಇದರಿಂದ ಶಾಲಾ ಬಸ್ಗಳು ಹಾಗೂ ವಿದ್ಯಾರ್ಥಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬ ದೂರುಗಳು ಪೋಷಕರು ಮತ್ತು ಸಾರ್ವಜನಿಕರಿಂದ ಬಂದಿದ್ದವು.

ಶಾಲಾ ಬಸ್ಗಳ ಸಂಚಾರ ಮತ್ತು ಪ್ರಮುಖ ಪೀಕ್ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಭಾರಿ ವಾಹನಗಳ ಸಂಚಾರಕ್ಕೆ ಹೊಸ ವೇಳಾಪಟ್ಟಿ ನಿಗದಿಪಡಿಸಲಾಗಿದೆ. ರಸ್ತೆ ಅಗಲೀಕರಣ ಸೇರಿದಂತೆ ಅಗತ್ಯ ಕಾಮಗಾರಿಗಳು ಪೂರ್ಣಗೊಂಡು ಸಂಚಾರ ವ್ಯವಸ್ಥೆ ಸಹಜ ಸ್ಥಿತಿಗೆ ಬರುವವರೆಗೆ ನಿರ್ಬಂಧ ಮುಂದುವರಿಯಲಿದೆ ಎಂದು ಸಂಚಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಹೊಸ ನಿಯಮದಿಂದ ಶಾಲಾ ಸಮಯದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande