


ಬಳ್ಳಾರಿ, 23 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ನಗರದ ಡಾ. ರಾಜಕುಮಾರ ರಸ್ತೆಯಲ್ಲಿರುವ ತಾರಾನಾಥ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯಲ್ಲಿ 11ನೇ ರಾಷ್ಟಿಯ ಆಯುರ್ವೇದ ದಿನಾಚರಣೆಯನ್ನು ಬುಧವಾರ ಸಂಭ್ರಮದಿ0ದ ಆಚರಿಸಲಾಯಿತು. ಈ ವರ್ಷ “ಭವಿಷ್ಯದ ಆರೋಗ್ಯಕ್ಕಾಗಿ ಆಯುರ್ವೇದ” ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಭಗವಾನ್ ಧನ್ವಂತರಿಯ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಸಂಸ್ಥೆಯ ನಿವೃತ್ತ ಆರ್ಎಂಒ ಡಾ. ಎನ್. ಲಕ್ಷಿನರಸಿಂಹ ಅವರು, ಸಂಸ್ಥೆಯೊ0ದಿಗಿನ ಒಡನಾಟ ಹಾಗೂ ಆಯುರ್ವೇದದ ಮಹತ್ವವನ್ನು ಸ್ಮರಿಸುತ್ತಾ, ಇಂದು ಕಾಲೇಜು ಮತ್ತು ಆಸ್ಪತ್ರೆ ಉತ್ತಮ ರೀತಿಯಲ್ಲಿ ಬೆಳೆದು ನಿಂತಿರುವುದಕ್ಕೆ ಶ್ರಮಿಸಿದ ಮಹನೀಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ. ರಾಜಶೇಖರ ಗಾಣಿಗೆರ ಅವರು ಮಾತನಾಡಿ, ಆಯುರ್ವೇದ ಇಂದು ವಿಶ್ವಮಟ್ಟದಲ್ಲಿ ಮನ್ನಣೆ ಗಳಿಸುತ್ತಿದೆ. ಇದು ಕೇವಲ ಚಿಕಿತ್ಸಾ ಪದ್ಧತಿಯಾಗಿರದೆ, ಆರೋಗ್ಯಕರ ಜೀವನ ಶೈಲಿಯನ್ನು ರೂಪಿಸುವ ಜೀವನ ವಿಜ್ಞಾನವಾಗಿದೆ. ಆಯುರ್ವೇದದ ಬೆಳವಣಿಗೆಯಲ್ಲಿ ಆಯುಷ್ ಮಂತ್ರಾಲಯದ ಪಾತ್ರ ಹಾಗೂ ತಾರಾನಾಥ ಸಂಸ್ಥೆಯ ಕೊಡುಗೆ ಮಹತ್ವದ್ದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಜಾನಕಿ ವೈ. ಎಸ್. ಅವರು, ಆಯುರ್ವೇದದ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಮತ್ತು ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಆಯುರ್ವೇದದ ಪಾತ್ರವನ್ನು ಇನ್ನಷ್ಟು ಬಲಪಡಿಸುವುದು ಇಂದಿನ ಅಗತ್ಯವಾಗಿದೆ ಎಂದರು.
ಕಳೆದ ಹತ್ತು ದಿನಗಳಿಂದ ಪದವಿ, ಸ್ನಾತಕೋತ್ತರ ವಿದ್ಯಾರ್ಥಿಗಳು, ಹೌಸ್ ಸರ್ಜನ್ಗಳು ಹಾಗೂ ಸಾರ್ವಜನಿಕರಿಗಾಗಿ ಆಯೋಜಿಸಲಾಗಿದ್ದ ಆರೋಗ್ಯ ಜಾಗೃತಿ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳ ಸಮಗ್ರ ವರದಿಯನ್ನು ನೋಡಲ್ ಅಧಿಕಾರಿ ಡಾ. ಸಂತೋಷ್ ಎಲ್. ಯಡಹಳ್ಳಿ ಮಂಡಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಆಸ್ಪತ್ರೆಯ ಸ್ಥಾಯಿ ವೈದ್ಯಾಧಿಕಾರಿ ಡಾ. ಎಸ್. ಎಂ. ಕೊಟ್ರೇಶ್ ಮತ್ತು ದಿನಾಚರಣೆಯ ಸಂಯೋಜಕ ಡಾ. ಅಶೋಕ ಗುತ್ತೇದಾರ್ ಉಪಸ್ಥಿತರಿದ್ದರು.
ಡಾ. ಕೃಷ್ಣ ನಾಯಕ್ ಸ್ವಾಗತಿಸಿದರು. ಡಾ. ಶಿಲ್ಪಶ್ರೀ ಕಾರ್ಯಕ್ರಮ ನಿರೂಪಿಸಿದರು. ಡಾ. ಅಶೋಕ ಗುತ್ತೇದಾರ್ ವಂದಿಸಿದರು. ಸಮಾರಂಭದಲ್ಲಿ ಬೋಧಕ-ಬೋಧಕೇತರ ಸಿಬ್ಬಂದಿ, ಆಸ್ಪತ್ರೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್