
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪರಿಸರ ಸಂರಕ್ಷಣೆಯು ಸಂರಕ್ಷಣೆ, ಸೌಹಾರ್ದತೆ ಮತ್ತು ಮಾನವ-ಪ್ರಕೃತಿಯ ಸಹಬಾಳ್ವೆಯ ಮೇಲೆ ಆಧಾರಿತವಾಗಿರಬೇಕು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದ್ರ ಯಾದವ್ ಬುಧವಾರ ತಿಳಿಸಿದ್ದಾರೆ.
ಹುಲಿಗಳ ಸಂರಕ್ಷಣೆಯನ್ನು ಕೇವಲ ಅವುಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಮಾತ್ರ ಮಿತಿಗೊಳಿಸದೆ, ಅರಣ್ಯ, ಹುಲ್ಲುಗಾವಲುಗಳು, ನದಿಗಳು, ವನ್ಯಜೀವಿ ಕಾರಿಡಾರ್ಗಳು ಮತ್ತು ಸ್ಥಳೀಯ ಸಮುದಾಯಗಳ ಸಮಗ್ರ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದರು.
ನವದೆಹಲಿಯಲ್ಲಿ ‘ಹುಲಿ ಭೂದೃಶ್ಯ: ಸಂರಕ್ಷಣೆ, ಜೈವಿಕ-ಆರ್ಥಿಕತೆ ಮತ್ತು ಜೀವನಾಧಾರ ಹಾಗೂ ಆದಾಯ ಸೃಷ್ಟಿಗಾಗಿ ಪರಿಸರ ಪ್ರವಾಸೋದ್ಯಮ’ ಎಂಬ ವಿಷಯದ ಕುರಿತು ಆಯೋಜಿಸಲಾಗಿರುವ ಎರಡು ದಿನಗಳ ಅಂತಾರಾಷ್ಟ್ರೀಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯನ್ಸ್ , ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ ಮತ್ತು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಸಂಯುಕ್ತವಾಗಿ ಸೆಪ್ಟೆಂಬರ್ 2 ಮತ್ತು 3 ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿವೆ.ಹುಲಿಗಳ ಅಸ್ತಿತ್ವವು ಆರೋಗ್ಯಕರ ಕಾಡುಗಳು, ನದಿಗಳು ಮತ್ತು ಸ್ಥಳೀಯ ಸಮುದಾಯಗಳೊಂದಿಗೆ ನೇರವಾಗಿ ನಂಟನ್ನು ಹೊಂದಿದೆ ಎಂದು ಸಚಿವರು ಅಭಿಪ್ರಾಯಪಟ್ಟರು.
ಕೇವಲ ಪ್ರಭೇದ-ಆಧಾರಿತ ಸಂರಕ್ಷಣೆಯಿಂದ ಹೊರಬಂದು, ಪರಿಸರ ಸುರಕ್ಷತೆಯೊಂದಿಗೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುವ ಸಮಗ್ರ ಭೂದೃಶ್ಯ ನಿರ್ವಹಣೆಯತ್ತ ನಾವೆಲ್ಲರೂ ಹೆಜ್ಜೆಹಾಕಬೇಕಿದೆ ಎಂದರು.ಈ ಕಾರ್ಯಕ್ರಮದ ವೇಳೆ ಐಬಿಸಿಎ ಹಾಗೂ ಎಡಿಬಿ ನಡುವೆ ಮಹತ್ವದ ತಿಳಿವಳಿಕೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಇದರಡಿ ಎರಡೂ ಸಂಸ್ಥೆಗಳು ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ ಹಾಗೂ ಪ್ರಕೃತಿ ಆಧಾರಿತ ಆರ್ಥಿಕ ಉಪಕ್ರಮಗಳ ಕ್ಷೇತ್ರಗಳಲ್ಲಿ ಪರಸ್ಪರ ಸಹಕರಿಸಲಿವೆ.
ಬಾಂಗ್ಲಾದೇಶ, ಭೂತಾನ್, ಕಾಂಬೋಡಿಯಾ, ಮಲೇಷ್ಯಾ, ನೇಪಾಳ ಮತ್ತು ದೇಶಗಳ ತಜ್ಞರು ಹಾಗೂ ವಿವಿಧ ರಾಜ್ಯಗಳ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹುಲಿ ಆವಾಸಸ್ಥಾನಗಳ ಸಂರಕ್ಷಣೆ ಜೊತೆಗೆ ಸ್ಥಳೀಯರ ಜೀವನೋಪಾಯವನ್ನು ಸುಧಾರಿಸುವ ನೂತನ ಮಾರ್ಗೋಪಾಯಗಳ ಕುರಿತು ಇಲ್ಲಿ ವ್ಯಾಪಕ ಚರ್ಚೆಗಳು ನಡೆಯುತ್ತಿವೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R