
ನವದೆಹಲಿ, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:
ಕೇಂದ್ರ ಸರ್ಕಾರ ಘೋಷಿಸಿರುವ ಶೇ.7.8ರ ಜಿಡಿಪಿ ಬೆಳವಣಿಗೆ ದರದ ಬಗ್ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್ ಪ್ರಶ್ನೆ ಎತ್ತಿದ್ದಾರೆ. ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಗರ್ಗ್ ಅವರ ಅಂದಾಜಿನಂತೆ ದೇಶದ ನೈಜ ಜಿಡಿಪಿ ಬೆಳವಣಿಗೆ ಶೇ.2.6ರಷ್ಟಿದೆ ಎಂದು ಅವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬುಧವಾರ ಹೇಳಿಕೆ ನೀಡಿರುವ ಜೈರಾಮ್ ರಮೇಶ್, ಸರ್ಕಾರ ಅಂಕಿ-ಅಂಶಗಳ ಮೂಲಕ ಆರ್ಥಿಕತೆಯ ಚಿತ್ರಣವನ್ನು ಸುಂದರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಸರ್ಕಾರ ಮೊದಲು ಆರ್ಥಿಕತೆಯ ವಾಸ್ತವ ಸ್ಥಿತಿಯನ್ನು ಒಪ್ಪಿಕೊಂಡು, ಬಳಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವುದು, ಜನರ ಬೇಡಿಕೆ ಮತ್ತು ಆದಾಯ ಹೆಚ್ಚಿಸುವತ್ತ ಗಮನಹರಿಸಬೇಕು. ಆರ್ಥಿಕ ಅಸಮಾನತೆ ಕಡಿಮೆ ಮಾಡಿ, ಆಯ್ದ ಉದ್ಯಮಿಗಳಿಗೆ ಅನುಕೂಲ ಕಲ್ಪಿಸುವ ಬದಲು ನ್ಯಾಯಸಮ್ಮತ ಸ್ಪರ್ಧೆಗೆ ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಜನಸಂಪರ್ಕದ ಮೂಲಕ ಜಿಡಿಪಿಯ ಚಿತ್ರಣವನ್ನು ಬದಲಿಸಬಹುದು, ಆದರೆ ಅದರಿಂದ ಆರ್ಥಿಕತೆ ಬಲಿಷ್ಠವಾಗುವುದಿಲ್ಲ. ಶೇ.7.8ರ ಜಿಡಿಪಿ ಬೆಳವಣಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ಸಂಭ್ರಮಿಸುತ್ತಿರುವ ನಡುವೆಯೇ ಅವರ ಮಾಜಿ ಹಣಕಾಸು ಕಾರ್ಯದರ್ಶಿಯೇ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ಜೈರಾಮ್ ರಮೇಶ್ ಟೀಕಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.